ಬೆಂಗಳೂರು,ಜ 26 (DaijiworldNews/KP): ತುಮಕೂರು ಜಿಲ್ಲೆಯ ಮಹೀಂದ್ರಾ ಶೋರೂಂನಲ್ಲಿ ರೈತನೊಬ್ಬನಿಗೆ ಅವಮಾನ ಮಾಡಿದ ಘಟನೆಯ ಬಗ್ಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವುದು ಕಂಪನಿಯ ಪ್ರಮುಖ ಮೌಲ್ಯವಾಗಿದೆ ಎಂದು ಸಾರ್ವಜನಿಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಆನಂದ್ ಮಹೀಂದ್ರ ಅವರು ಮಂಗಳವಾರ ಟ್ವೀಟ್ ಮಾಡಿ, ನಮ್ಮ ಸಮುದಾಯ ಹಾಗೂ ಎಲ್ಲಾ ಪಾಲುದಾರರಿಗೆ ಶಕ್ತಿ ತುಂಬುವುದು ನಮ್ಮ ಮುಖ್ಯ ಉದ್ದೇಶವಾಗಿದೆ . ಒಬ್ಬ ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಕಂಪನಿಯ ಮೊದಲ ಆದ್ಯತೆಯಾಗಿದೆ. ಈ ವಿಚಾರದಲ್ಲಿ ಕಂಪನಿಯು ಯಾವುದೇ ರೀತಿಯಲ್ಲಿ ರಾಜಿಯಾಗುವಂತಹ ಅಥವಾ ನಮ್ಮ ತತ್ವದ ವಿರುದ್ಧ ನಡೆದುಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬೊಲೆರೊ ಪಿಕ್ ಅಪ್ ವಾಹನ ಖರೀದಿಸಲು ಬಂದ ರೈತ ಕೆಂಪೇಗೌಡ ಅವರ ಬಳಿ 10 ರೂ. ಇಲ್ಲ ಎಂದು ಶೋರೂಂ ಸಿಬ್ಬಂದಿ ಅವಮಾನ ಮಾಡಿದಾಗ ಗೌಡರು ಕೇವಲ 30 ನಿಮಿಷಗಳಲ್ಲಿ 10 ಲಕ್ಷ ರೂ.ಗಳನ್ನು ವ್ಯವಸ್ಥೆ ಮಾಡಿ ವಾಹನವನ್ನು ತಕ್ಷಣ ತಲುಪಿಸುವಂತೆ ಒತ್ತಾಯಿಸಿದ್ದರು.
ನಂತರ ಪೊಲೀಸರ ಮಧ್ಯಪ್ರವೇಶದ ಬಳಿಕ ಸಮಸ್ಯೆ ಬಗೆಹರಿಸಿದ್ದು, ಶೋರೂಂ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ, ಅಲ್ಲದೆ ವಾಹನ ತಲುಪಿಸಲು ಮೂರು ದಿನಗಳ ಕಾಲಾವಕಾಶ ಕೋರಿದ್ದಾರೆ.
ಇನ್ನು ಇದೇ ಘಟನೆಯ ವಿಚಾರವಾಗಿ ಟ್ವೀಟ್ ಮಾಡಿರುವ ಮಹೀಂದ್ರಾ ಕಂಪನಿಯ ಸಿಇಓ ವಿಜಯ್ ನಕ್ರಾ, ಗ್ರಾಹಕರಿಗೆ ಉತ್ತಮ ಅನುಭವ ನೀಡಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಈ ಪ್ರಯತ್ನದಲ್ಲಿ ಡೀಲರ್ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ಎಲ್ಲಾ ಗ್ರಾಹಕರನ್ನು ಗೌರವದಿಂದ ಕಾಣಬೇಕು ಎಂಬುದು ನಮ್ಮ ಕಂಪನಿಯ ಧ್ಯೇಯವಾಗಿದೆ. ಆದರೆ ನಮ್ಮ ಕಂಪನಿಯ ಡೀಲರ್ ಗ್ರಾಹಕರಿಗೆ ಗೌರವ ನೀಡುವ ವಿಚಾರದಲ್ಲಿ ಎಡವಿರುವುದು ಸಾಬೀತಾದಲ್ಲಿ ಅವರನ್ನು ಕೌನ್ಸೆಲಿಂಗ್ಗೆ ಒಳಪಡಿಸುವುದರ ಜೊತೆಯಲ್ಲಿ ಆ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.