ಬೆಂಗಳೂರು,ಜ 24 (DaijiworldNews/KP): ಸಚಿವರ ಒತ್ತಯಕ್ಕೆ ಬಿಲ್ಕುಲ್ ಕ್ಯಾರೆ ಎನ್ನದ ಕೇಂದ್ರ ಬಿಜೆಪಿ ವರಿಷ್ಠರು, ಪಂಚರಾಜ್ಯಗಳ ವಿಧಾನಸಭೆ ಫಲಿತಾಂಶವು 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಅತ್ಯಂತ ಮಹತ್ವವಾಗಿದ್ದು ಸದ್ಯ ವಿಸ್ತರಣೆಗೆ ಕೈ ಹಾಕದಿರಲು ತೀರ್ಮಾನಿಸಿದೆ.
ಚುನಾವಣಾ ವರ್ಷ ಆಗಿರುವುದರಿಂದ ಖಾಲಿ ಇರುವ ನಾಲ್ಕು ಸ್ಥಾನಗಳ ಜೊತೆಗೆ ಕೆಲವು ಅದಕ್ಷ ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲು ಸಂಪುಟ ಪುನಾರಚನೆ ನಡೆಯಬೇಕೆಂಬುದು ಬಹುತೇಕರ ಬೇಡಿಕೆಯಾಗಿದೆ, ಆದರೆ ಕೇಂದ್ರ ಬಿಜೆಪಿ ವರಿಷ್ಠರು ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಸಂಪುಟ ಪುನಾರಚನೆ ಕೈ ಹಾಕದಿರಲು ತೀರ್ಮಾನಿಸಿದ್ದಾರೆ.
ಎಲ್ಲರ ಗಮನ ಸೆಳೆದಿರುವ ಉತ್ತರಪ್ರದೇಶ, ಉತ್ತರಖಂಡ್, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಫಲಿತಾಂಶದ ನಂತರವಷ್ಟೇ ಕರ್ನಾಟಕದ ಸಂಪುಟವನ್ನು ವಿಸ್ತರಣೆ ಮಾಡಲಾಗುವುದು ಅಲ್ಲಿಯವರೆಗೆ ಕರ್ನಾಟಕದ ಯಾವುದೇ ಬೆಳವಣಿಗೆಗಳ ಬಗ್ಗೆ ಗಮನಹರಿಸದಿರಲು ದೆಹಲಿ ವರಿಷ್ಠರು ತೀರ್ಮಾನಿಸಿದ್ದಾರೆ.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆ ಚರ್ಚಿಸಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಬಿಜೆಪಿ ನಾಯಕರು ಸಂಪುಟ ಪುನಾರಚನೆ, ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಸೇರಿದಂತೆ ಯಾವುದೇ ವಿಷಯಗಳ ಬಗ್ಗೆ ಶಾಸಕರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಶಾಸಕರಾದ ಬಸವನಗೌಡ ಪಾಟೀಲ್ಯತ್ನಾಳ್, ಎಂ.ಪಿ.ರೇಣುಕಾಚಾರ್ಯ ಹಾಗೂ ನಿನ್ನೆಯಷ್ಟೇ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಸ್ಥಳೀಯ ಶಾಸಕರು ಸಭೆ ನಡೆಸಿ ಶೀಘ್ರದಲ್ಲೇ ಸಂಪುಟ ಪುನಾರಚನೆಯಾಗಬೇಕೆಂದು ಸರ್ಕಾರಕ್ಕೆ ಒತ್ತಡ ಹಾಕಿದ್ದರು.
ಆದರೆ ಬಿಜೆಪಿ ವರಿಷ್ಠರು ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಪ್ರಚಾರ, ಟಿಕೆಟ್ ಹಂಚಿಕೆ, ಕಾರ್ಯತಂತ್ರ ಸೇರಿದಂತೆ ಇತರ ವಿಷಯಗಳಲ್ಲಿ ತಲ್ಲೀನರಾಗಿರುವುದರಿಂದ ಸಚಿವ ಸಂಪುಟವನ್ನು ಸೂಕ್ತ ಸಂದರ್ಭದಲ್ಲಿ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಖಾಲಿ ಇರುವ ನಾಲ್ಕು ಸ್ಥಾನಗಳು ಹಾಗೂ ಹಿರಿಯರ ಜತೆಗೆ 8ರಿಂದ 10 ಸಚಿವರನ್ನು ಕೈಬಿಟ್ಟು ಮುಖ್ಯಮಂತ್ರಿ ಹೊರತುಪಡಿಸಿ ಗುಜರಾತ್ ಮಾದರಿಯಂತೆ ಇಲ್ಲೂ ಕೂಡ ಸಂಪುಟ ವಿಸ್ತರಣೆ ಮಾಡಬೇಕೆಂದು ಶಾಸಕರು ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದು, ಪಂಚರಾಜ್ಯಗಳ ವಿಧಾನಸಭೆ ಚುನಾವಣೆ, 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ನಮಗೆ ಅತ್ಯಂತ ಮಹತ್ವದಾಗಿದೆ ನಾವು ಕಡೆ ಪಕ್ಷ 3ರಿಂದ 4 ರಾಜ್ಯಗಳಲ್ಲಿ ಜಯಗಳಿಸಬೇಕು.
ಸಂಪುಟ ತಕ್ಷಣವೇ ರಚನೆಯಾಗದಿದ್ದರೆ ಕಳೆದುಕೊಳ್ಳುವಂತಹದ್ದು ಏನಿಲ್ಲ. ಏನೇ ಸಮಸ್ಯೆಗಳಿದ್ದರೂ ಶಾಸಕರು, ಪಕ್ಷದ ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ ಅವರ ಬಳಿ ಚರ್ಚಿಸಬಹುದು. ಹಾದಿಬೀದಿಯಲ್ಲಿ ಮಾತನಾಡುವವರ ಬಗ್ಗೆ ನಾವು ನಿಗಾವಹಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.