ಬೆಂಗಳೂರು, ಜ 24 (DaijiworldNews/MS): ಸಚಿವ ಸಂಪುಟ ವಿಸ್ತರಣೆ ಮಾಡುವುದಾದರೆ ಶೀಘ್ರವಾಗಿ ಮಾಡಬೇಕು. ತಡವಾಗಿ ಸಂಪುಟ ವಿಸ್ತರಣೆ ಮಾಡಿದರೆ ಉಪಯೋಗ ಇಲ್ಲ, ಉತ್ತರಪ್ರದೇಶದಲ್ಲಿ ಆಗಿರುವಂತೆ ಅಧಿಕಾರವನ್ನು ಅನುಭವಿಸಿದ ಬಳಿಕ ಪಕ್ಷ ಬಿಟ್ಟು, ಜಾತ್ರೆ ಮಾಡ್ಕೊಂಡು ಹೋಗುತ್ತಾರೆ . ವಲಸಿಗರ ಪಕ್ಷ ನಿಷ್ಟೆ ಇರುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಯತ್ನಾಳ್, " ಹಲವರು ಈಗಾಗಲೇ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಜೊತೆಗೆ ಸೀಟ್ ಬಗ್ಗೆ ಮಾತಾಡಿಕೊಂಡಿದ್ದು, ಅದರ ಬಗ್ಗೆ ನಮಗೆ ಮಾಹಿತಿ ಇದೆ. ಚುನಾವಣೆ ಘೋಷಣೆ ಆದ ಬಳಿಕ ಸಚಿವ ಸ್ಥಾನ ಮತ್ತು ಬಿಜೆಪಿ ಗೆ ರಾಜೀನಾಮೆ ಕೊಟ್ಟು ಹೋಗುತ್ತಾರೆ. ಹೊರಗಿನಿಂದ ಬಂದ ಎಲ್ಲರಿಗೂ ಪಕ್ಷ ನಿಷ್ಠೆ ಇಲ್ಲ ಎಂದು ಹೇಳುವುದಿಲ್ಲ, ಈ ಪೈಕಿ ಕೆಲವರಿಗೆ ಪಕ್ಷ ನಿಷ್ಠೆ ಇಲ್ಲ. ಹೀಗಾಗಿ ಕೆಲವರು ಪಕ್ಷ ತೊರೆಯುವ ನಿಟ್ಟಿನಲ್ಲಿ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮಾಡುವುದಾದರೆ ವಾರದೊಳಗೆ ಮಾಡಬೇಕು. ಅಮೇಲೆ ಮಾಡಿದರೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಆಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು.ಸಂಪುಟ ಪುನಾರಚನೆ ಬೇಗ ಆಗಬೇಕು ಎಂದು ಒತ್ತಾಯಿಸಿದ್ದಾರೆ.