ಮುಂಬೈ, ಜ 24 (DaijiworldNews/MS): ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು 25 ವರ್ಷಗಳನ್ನು ನಮ್ಮ ಪಕ್ಷ ವ್ಯರ್ಥ ಮಾಡಿದೆ. ಬಿಜೆಪಿಯೂ ಅಧಿಕಾರಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡಿದೆ, ಆದರೆ ನಾವು ಬಿಜೆಪಿಯನ್ನು ಬಿಟ್ಟಿದ್ದೇವೆ. ಹಾಗೆಂದು ರೆ ಹಿಂದುತ್ವವನ್ನು ಬಿಡುವುದಿಲ್ಲ, ಬಿಜೆಪಿ ಪಕ್ಷ ಎಂದರೆ ಹಿಂದುತ್ವವಲ್ಲ , ನಾವು ಅವರಿಗೆ ಸವಾಲು ಹಾಕಿದಾಗ ನಮ್ಮ ವಿರುದ್ಧ ತಂತ್ರಗಳನ್ನು ಬಳಸಲಾಯಿತು ಎಂದು ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆಯವರ 96ನೇ ಜನ್ಮದಿನದಂದು ವರ್ಚುವಲ್ ಮೋಡ್ ಮೂಲಕ ಶಿವಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ " ಪಕ್ಷವು ರಾಜ್ಯದ ಹೊರಗೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತದೆ ಅಲ್ಲದೆ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ತಮ್ಮ ಪ್ರಮುಖ ಗುರಿಯಾಗಿರಿಸಿಕೊಳ್ಳುತ್ತದೆ " ಎಂದು ಹೇಳಿದ್ದಾರೆ.
ಬಿಜೆಪಿಯ ತತ್ವವೆಂದರೆ ಬಳಸಿ ಬಿಸಾಕುವ ನೀತಿಯಾಗಿದೆ. ಬಿಜೆಪಿ ಅಭ್ಯರ್ಥಿಗಳು ಎಂದರೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುತ್ತಿದ್ದ ದಿನಗಳು ಇತ್ತು. ಆ ಸಮಯದಲ್ಲಿ ಬಿಜೆಪಿಗೆ ನಮ್ಮ ಅಗತ್ಯವಿತ್ತು ಇದಕ್ಕಾಗಿ ಪ್ರಾದೇಶಿಕ ಪಕ್ಷಗಳೊಂದಿಗೆ ನಮ್ಮೊಂದಿಗೆ, ಅಕಾಲಿದಳ ಮತ್ತು ಟಿಎಂಸಿಯೊಂದಿಗೆ ಮೈತ್ರಿ ಮಾಡಿಕೊಂಡರು. ಎಲ್ಲರನ್ನೂ ಒಟ್ಟು ಸೇರಿಸಿ ಅಟಲ್ ಬಿಹಾರಿ ವಾಜಪೇಯಿ ಕೇಂದ್ರದಲ್ಲಿ ಸರ್ಕಾರ ರಚಿಸಿದರು. ನಾವು ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದೇವೆ. ಆದರೆ ಈಗಿನ ನವ-ಹಿಂದುತ್ವವಾದಿಗಳು ಹಿಂದುತ್ವವನ್ನು ತಮ್ಮ ಲಾಭಕ್ಕಾಗಿ ಮಾತ್ರ ಬಳಸುತ್ತಿದ್ದಾರೆ ಎಂದು ಸಿಎಂ ಠಾಕ್ರೆ ಆರೋಪಿಸಿದರು.
ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸುವ ಗೃಹ ಸಚಿವ ಅಮಿತ್ ಶಾ ಅವರ ಸವಾಲಿಗೆ ಉತ್ತರಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, "ನಾವು ಏಕಾಂಗಿಯಾಗಿ ಹೋರಾಡಲು ಸಿದ್ಧರಿದ್ದೇವೆ, ಆದರೆ ನಿಮ್ಮ ನೀವು ಗೆಲುವಿಗಾಗಿ ಸರ್ಕಾರದ ಅಧಿಕಾರವನ್ನು ಬಳಸಿಕೊಳ್ಳಬೇಡಿ ಎಂಬುದು ನನ್ನ ಷರತ್ತು. ನಾವೂ ನಮ್ಮ ಶಕ್ತಿಯನ್ನು ಬಳಸುವುದಿಲ್ಲ. ಏನಿದ್ದರೂ ಎರಡು ರಾಜಕೀಯ ಪಕ್ಷಗಳಾಗಿ ಹೋರಾಡೋಣ ಎಂದು ಮರು ಸವಾಲು ಹಾಕಿದರು.