ಬೆಂಗಳೂರು, ಜ 24 (DaijiworldNews/MS): " ಮುಂದಿನ ಮುಖ್ಯಮಂತ್ರಿ ನೀವೇ ಎಂದು ಬಹಿರಂಗವಾಗಿ ಪದೇ ಪದೇ ಹೇಳಬೇಡಿ. ಅದರಿಂದ ನನಗೆ ಬಹಳ ಕಷ್ಟ ಆಗುತ್ತದೆ. ಯಾಕಂದ್ರೆ ನೀವು ಇಲ್ಲಿ ಹೀಗೆ ಹೇಳಿದ್ರೆ, ನನಗೆ ಅಲ್ಲಿ ಹೊಡೆತ ಬೀಳಲಿದೆ ಎಂದು ಚಿಕ್ಕಗುಂಡುಗಲ್ಲು ಗ್ರಾಮದಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರು ನೀಡಿದ ಹೇಳಿಕೆ ವಿಚಾರವಾಗಿ "ಸಿಎಂ ಸ್ಥಾನದ ಕನಸು ಕಾಣಲು ಅಂಜುವ ಪರಮೇಶ್ವರ್ ಗೆ ಹೊಡೆತ ಕೊಡುವುದು ಯಾರು? " ಎಂದು ರಾಜ್ಯ ಬಿಜೆಪಿ ಘಟಕವು ಕಾಂಗ್ರೆಸ್ ಕಾಲೆಳೆದಿದೆ.
ಈ ಬಗ್ಗೆ ಟ್ವೀಟ್ ಮಾಡಿ ಪ್ರಶ್ನಿಸಿರುವ ಬಿಜೆಪಿಯೂ, " ಪರಮೇಶ್ವರ್ ಅವರು ಈ ಹಿಂದೆ ಮುಖ್ಯಮಂತ್ರಿ ಸ್ಥಾನದ ಕನಸು ಕಂಡವರು. ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದವರು. ಆದರೆ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯ್ತು. ಈಗ ಸಿಎಂ ಸ್ಥಾನದ ಕನಸು ಕಾಣುವುದಕ್ಕೂ ಅವರು ಅಂಜುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನೀತಿಯೇ ಇದಕ್ಕೆ ಕಾರಣವಲ್ಲವೇ? " ಎಂದು ಪ್ರಶ್ನಿಸಿದೆ.
ಪರಮೇಶ್ವರ್ ಅವರ ಹೇಳಿಕೆಯ ವರದಿಯನ್ನು ಟ್ವೀಟ್ ನಲ್ಲಿ ಲಗತ್ತಿಸಿರುವ ಬಿಜೆಪಿಯೂ, " ಕಾಂಗ್ರೆಸ್ ಪಕ್ಷ ದಲಿತ ಮುಖಂಡರೊಬ್ಬರು ಆತಂಕದಿಂದ ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ?ಕಾಂಗ್ರೆಸ್ ಪಕ್ಷದಲ್ಲಿ ದಲಿತರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುವುದೇ ತಪ್ಪೇ?ಹಾಗಾದರೆ ಡಾ.ಜಿ.ಪರಮೇಶ್ವರ್ ಅವರಿಗೆ ಹೊಡೆತ ಕೊಡುವುದು ಯಾರು? ಸಿದ್ದರಾಮಯ್ಯನವರೇ ನಿಮಗೇನಾದರೂ ಗೊತ್ತಾ?" ಎಂದು ಲೇವಡಿ ಮಾಡಿದೆ.