ಮೈಸೂರು, ಜ 24 (DaijiworldNews/MS): ಇಳಿ ವಯಸ್ಸಿನಲ್ಲಿ ಏಕಾಂಗಿತನದ ಬೇಸರವನ್ನು ಹೋಗಲಾಡಿಸಲು ಒಂಟಿ ಜೀವನ ನಡೆಸುತ್ತಿದ್ದ ಇಬ್ಬರು ಹಿರಿಯ ನಾಗರಿಕರು ಸತಿ ಪತಿಗಳಾಗಿದ್ದರೆ. ಇಲ್ಲಿನ ಉದಯನಗರ ಗೌಸಿಯಾನಗರದ ನಿವಾಸಿ ಮುಸ್ತಫಾ (85) ಅವರು ಅದೇ ಬಡಾವಣೆಯ ಫಾತಿಮಾ ಬೇಗಂ(65) ಇವರು ವಿವಾಹವಾಗಿದ್ದಾರೆ.
ಇವರಿಬ್ಬರ ವಿವಾಹ ಸಮಾರಂಭಕ್ಕೆ ಮಕ್ಕಳು, ಮೊಮ್ಮಕ್ಕಳು ಸಾಕ್ಷಿಯಾಗಿ ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಕುರಿ ಸಾಕಾಣಿಕೆಯಿಂದ ಬಂದ ಆದಾಯದಲ್ಲಿ ಮುಸ್ತಫಾ ತನ್ನ ಒಂಬತ್ತು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂ ಅವರನ್ನು ಕಳೆದುಕೊಂಡಿದ್ದರು. ತನ್ನ ಎಲ್ಲಾ ಮಕ್ಕಳೂ ಮದುವೆಯಾಗಿ ಬೇರೆಡೆ ವಾಸವಾಗಿರುವುದರಿಂದ ಮುಸ್ತಫಾ ಅವರಿಗೆ ಇಳಿವಯಸ್ಸಿನಲ್ಲಿ ಒಂಟಿತನ ಕಾಡತೊಡಗಿತು. .ತನಗೊಂದು ಜೊತೆಗಾತಿ ಬೇಕು ಎಂದು ನಿರ್ಧರಿಸಿದ ಮುಸ್ತಫಾಗೆ ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ ಫರೀಮಾ ಬೇಗಂ (65) ಅವರನ್ನು ಸಂಪರ್ಕಿಸಿ ಮದುವೆಯ ಪ್ರಸ್ತಾಪ ಮುಂದಿರಿಸಿದರು . ಬೇಗಂ ಮತ್ತು ಅವರ ಕುಟುಂಬದವರು ಸಂಬಂಧವನ್ನು ಇದಕ್ಕೆ ಅನುಮತಿಸಿದರು.
ಈ ನಿರ್ಧಾರದಿಂದ ಆರಂಭದಲ್ಲಿ ಆಶ್ಚರ್ಯವಾಯಿತಾದರೂ ಇಬ್ಬರೂ ಪರಸ್ಪರ ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ ಎಂಬ ಭರವಸೆಯೊಂದಿಗೆ ಅವರ ಪೋಷಕರ ಆಶಯಗಳನ್ನು ಗೌರವಿಸಲಾಯಿತು ಎಂದು ವೃದ್ಧ ದಂಪತಿಗಳ ಮಕ್ಕಳು ಹೇಳಿದ್ದಾರೆ.