ಬೆಂಗಳೂರು, ಜ 23 (DaijiworldNews/HR): ಕೊರೊನಾ ಸೋಂಕು ಕಾಲಿಟ್ಟ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಅವೈಜ್ಞಾನಿಕವಾಗಿ ನಡೆದುಕೊಂಡಿದ್ದಾರೆ. ಸರ್ಕಾರದ ನಡೆ ಅವೈಜ್ಞಾನಿಕವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಹಾಗೂ ನಿರ್ಬಂಧಗಳ ಜಾರಿ ಸೇರಿದಂತೆ ಪ್ರತಿಯೊಂದು ಹಂತದಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಅವೈಜ್ಞಾನಿಕವೆಂಬ ಕಾಂಗ್ರೆಸ್ ನಾಯಕರ ಟೀಕೆಗೆ ಉತ್ತರಿಸಿದ್ದಾರೆ.
ಇನ್ನು ದೇಶಕ್ಕೆ ಕೊರೊನಾದ ಮೊದಲ ಅಲೆ ಪ್ರವೇಶಿಸಿದಾಗ ಕೇವಲ 100 ಸೋಂಕು ಪ್ರಕರಣಗಳು ವರದಿಯಾದ ತಕ್ಷಣ ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿ, ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ನಿಷೇಧ ಮಾಡಲಾಯಿತು. ವೈರಾಣು ಹೇಗೆ ವರ್ತಿಸುತ್ತದೆ ಎನ್ನುವುದು ತಿಳಿದಿಲ್ಲವಾದ್ದರಿಂದ ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು" ಎಂದಿದ್ದಾರೆ.