ನವದೆಹಲಿ, ಜ 22(DaijiworldNews/MS): ದೇಶದಲ್ಲಿ ಕೋವಿಡ್ ಪ್ರಕರಣಗಳ ನಿರಂತರ ಏರಿಕೆಯ ನಡುವೆ, ಪಂಚರಾಜ್ಯಗಳಲ್ಲಿ ಸಾರ್ವಜನಿಕ ಸಭೆ, ಚುನಾವಣಾ ಮೆರವಣಿಗೆ ಮತ್ತು ರೋಡ್ ಶೋ ಮೇಲಿನ ನಿರ್ಬಂಧವನ್ನು ಮತ್ತೊಂದು ವಾರಗಳವರೆಗೆ ವಿಸ್ತರಿಸಿದೆ. ಜ. 31 ರವರೆಗೆ 5 ರಾಜ್ಯಗಳಲ್ಲಿ ಚುನಾವಣಾ ರೋಡ್ ಶೋ, ಸಮಾವೇಶದ ಮೇಲಿನ ನಿಷೇಧ ಮುಂದುವರಿಯಲಿದೆ.
ಭೌತಿಕ ರ್ಯಾಲಿಗಳು ಮತ್ತು ರೋಡ್ಶೋಗಳ ಮೇಲೆ ವಿಧಿಸಲಾದ ನಿಷೇಧವನ್ನು ಮುಂದಿನ ವಾರದವರೆಗೆ ವಿಸ್ತರಿಸಲು ಚುನಾವಣಾ ಆಯೋಗ ಶನಿವಾರ ನಿರ್ಧರಿಸಿದೆ. ಕರೋನವೈರಸ್ ಹರಡುವುದನ್ನು ತಡೆಯಲು ಭೌತಿಕ ರ್ಯಾಲಿಗಳು ಮತ್ತು ರೋಡ್ಶೋಗಳ ಮೇಲೆ ವಿಧಿಸಿರುವ ನಿಷೇಧವನ್ನು ಮುಂದುವರಿಸಬೇಕೆ ಎಂದು ನಿರ್ಧರಿಸಲು ಆಯೋಗವು ಇಂದು ವರ್ಚುವಲ್ ಸಭೆಗಳನ್ನು ನಡೆಸಿತು ಮತ್ತು ದೇಶದಲ್ಲಿ ಕೋವಿಡ್ ಪರಿಸ್ಥಿತಿಯಲ್ಲಿ ಯಾವುದೇ ಪ್ರಮುಖ ಸುಧಾರಣೆ ಇಲ್ಲದ ಕಾರಣ ನಿಷೇಧ ಮುಂದುವರಿಸುವ ಬಗ್ಗೆ ನಿರ್ಧರಿಸಲಾಯಿತು. ಕನಿಷ್ಠ ಇನ್ನೊಂದು ವಾರದವರೆಗೆ ನಿರ್ಬಂಧ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ.
ಮನೆ-ಮನೆಗೆ ಪ್ರಚಾರದ ಸಂದರ್ಭದಲ್ಲಿ ಐದು ಜನರಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಹೇಳಿದೆ. ಆದಾಗ್ಯೂ, ರಾಜಕೀಯ ಪಕ್ಷಗಳು ಗರಿಷ್ಠ 300 ಜನರೊಂದಿಗೆ ಅಥವಾ ಸಭಾಂಗಣದ ಸಾಮರ್ಥ್ಯದ ಶೇಕಡಾ 50 ರಷ್ಟು ಒಳಾಂಗಣ ಸಭೆಗಳನ್ನು ನಡೆಸಲು ಸಡಿಲಿಕೆಯನ್ನು ನೀಡಲಾಗಿದೆ.
ಚುನಾವಣಾ ಸಮಿತಿಯು ಕೇಂದ್ರ ಆರೋಗ್ಯ ಸಚಿವಾಲಯ, ತಜ್ಞರು, ಐದು ಚುನಾವಣೆಗೆ ಒಳಪಟ್ಟ ರಾಜ್ಯಗಳು ಮತ್ತು ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಂದ ನಿರ್ಧಾರಕ್ಕೆ ಬರಲು ವರ್ಚುವಲ್ ಸಭೆಗಳನ್ನು ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.