ಲಕ್ನೋ, ಜ 22(DaijiworldNews/MS): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿ-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮತ್ತು ಇತರ ಎರಡು ಸಂಘಟನೆಗಳಾದ ಜನ್ ಅಧಿಕಾರ್ ಪಾರ್ಟಿ ಮತ್ತು ಭಾರತ್ ಮುಕ್ತಿ ಮೋರ್ಚಾ ಒಳಗೊಂಡ 'ಥರ್ಡ್ ಫ್ರಂಟ್' ಅನ್ನು ಶನಿವಾರ ರಚಿಸಲಾಗಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಘೋಷಿಸಿದ್ದಾರೆ.
ಈ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಇಬ್ಬರು ಮುಖ್ಯಮಂತ್ರಿಗಳಾಗುತ್ತಾರೆ. ಈ ಪೈಕಿ ಒಬ್ಬರು ದಲಿತ ಮತ್ತು ಒಬಿಸಿ ಸಮುದಾಯದವರಾಗಿರುತ್ತಾರೆ. ಮೂವರು ಉಪಮುಖ್ಯಮಂತ್ರಿಗಳು ಮುಸ್ಲಿಂ ಸಮುದಾಯದ ಸದಸ್ಯರನ್ನು ಒಳಗೊಂಡಿರುತ್ತಾರೆ. ರಾಜ್ಯದ ಎಲ್ಲಾ 403 ಸ್ಥಾನಗಳಲ್ಲಿ ಮೋರ್ಚಾ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಓವೈಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದು ಬಲವಂತದಿಂದ ರಚನೆಯಾದ ಮೈತ್ರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಬು ಸಿಂಗ್ ಕುಶ್ವಾಹಾ ಅವರು, ಇದು ಬಲವಂತದ ಮೈತ್ರಿ ಅಲ್ಲ. ನಾವು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕಾಗಿ ದೀರ್ಘಕಾಲ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.