ನವದೆಹಲಿ ಜ 22 (DaijiworldNews/KP): ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಾನು ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಖಚಿತಪಡಿಸಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ನಿಮ್ಮ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪತ್ರಕರ್ತರ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಪ್ರಿಯಾಂಕ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೇರೆಯವರ ಮುಖವನ್ನು ನೀವು ನೋಡುತ್ತೀದ್ದೀರಾ? ಕಾಂಗ್ರೆಸ್ ಪಕ್ಷದಿಂದ ಬೇರೆ ಮುಖ ಕಾಣಿಸುತ್ತಿದೆಯೇ, ಎಲ್ಲೆಡೆ ನೀವು ನನ್ನ ಮುಖವನ್ನು ನೋಡುತ್ತಿದ್ದೀರಿ ಎಂದು ಉತ್ತರಿಸುವ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದರು, ಆದರೆ ಇದೀಗ ತಮ್ಮ ಹೇಳಿಕೆಯನ್ನು ಹಿಂಪಡೆದಿರುವ ಅವರು, ತಾವು ಶುಕ್ರವಾರ ನೀಡಿದ್ದ ಹೇಳಿಕೆಯು ಉತ್ಪ್ರೇಕ್ಷೆಯಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ
ನಿನ್ನೆ ಪ್ರಿಯಾಂಕಾ ಗಾಂಧಿ ನೀಡಿದ್ದ ಹೇಳಿಕೆ ಉತ್ತರಪ್ರದೇಶದ ಚುನಾವಣಾ ರಣಾಂಗಣದಲ್ಲಿ ಚರ್ಚೆಗೆ ಕಾರಣವಾಗಿ, ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ಪಕ್ಷಗಳು ಈ ಹೇಳಿಕೆಯನ್ನು ನಿನ್ನೆ ಗಂಭೀರವಾಗಿ ಪರಿಗಣಿಸಿದ್ದರು.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರವನ್ನು ಮುನ್ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಬಗ್ಗೆ ಇನ್ನೂ ಖಚಿತಪಡಿಸಿಲ್ಲ.