ಬೆಂಗಳೂರು ಜ 22 (DaijiworldNews/KP): ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಣನಿಯವಾಗಿ ಏರಿಕೆಯಾಗಿದ್ದು, ಸರ್ಕಾರವು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಹರಿಸದೆ ಇರುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆರೋಪಿಸಿದರು.
ಸರ್ಕಾರವು ಯಾವುದೇ ಕಾರಣಕ್ಕೂ 3ನೇ ಅಲೆಯ ನಿಯಂತ್ರಣ ಕ್ರಮದ ಬಗ್ಗೆ ನಿರ್ಲಕ್ಷ್ಯ ತೊರಬಾರದು, ಎರಡನೆ ಅಲೆಯಲ್ಲಾದ ಸಾಕಷ್ಟು ಸಾವು-ನೋವುಗಳನ್ನು ಜನರು ಮರೆತಿಲ್ಲ. ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು ಎಂದರು.
ಎಲ್ಲೆಡೆ ಜನರು ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ವಾರಾಂತ್ಯ ಕರ್ಫ್ಯೂವನ್ನು ಹಿಂಪಡೆದಿದೆ, ಇದರಿಂದ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮ ಬೇಕಾದರು ಉಂಟಾಗಬಹುದು ಕಾದು ನೋಡೋಣ ಎಂದು ಹೇಳಿದರು.
ಸೋಂಕು ಹೆಚ್ಚಾಗಿ ಮಕ್ಕಳನ್ನು ಕಾಡುತ್ತಿದೆ ಈ ಕಾರಣದಿಂದ ಶಾಲೆಗಳನ್ನು ಕೆಲ ಸಮಯ ಮುಚ್ಚುವುದು ಒಳ್ಳೆಯದು. ವಸತಿ ಶಾಲೆಗಳಲ್ಲೂ ಕೊರೊನಾ ಪಾಸಿಟಿವ್ ಕಂಡುಬರುತ್ತಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸೋಂಕು ಇಳಿಮುಖವಾಗಿರುವ ಶಾಲೆಗಳನ್ನು ಕೂಡ ತೆರೆಯದಿರುವುದು ಉತ್ತಮ ಎಂದಿದ್ದಾರೆ.
ಕೊರೊನಾ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸರ್ಕಾರ ಸಹಾಯ ಹಸ್ತ ಚಾಚಬೇಕು, ಕೆಲವು ಸಂಘಟನೆಗಳ ಒತ್ತಡಕ್ಕೆ ಮಣಿದು ವಾರಾಂತ್ಯದ ಕರ್ಫ್ಯೂವನ್ನು ರದ್ದು ಪಡಿಸಿದೆ ಆದರೆ ಇತರೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.