ಬೆಂಗಳೂರು ಜ 22 (DaijiworldNews/KP): ಕಳೆದ ವರ್ಷ ಕೋವಿಡ್ ತೀವ್ರವಾಗಿ ಕಾಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಉತ್ತೀರ್ಣರಾಗಿದ್ದರು ಆದರೆ ಈ ವರ್ಷ ಆ ವಿನಾಯಿತಿ ಇರುವುದಿಲ್ಲ, ಎಲ್ಲಾ ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಈ ಬಾರಿಯ ಎಸ್ಎಸ್ಎಲ್'ಸಿ ಪರೀಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಬಹುತೇಕ ಎಲ್ಲಾ ಶಾಲೆಗಳು ಶೇಕಡಾ 70 ರಷ್ಟು ಪಠ್ಯಕ್ರಮಗಳನ್ನು ಪೂರ್ಣಗೊಳಿಸಿವೆ, ಇನ್ನು ವಿದ್ಯಾರ್ಥಿಗಳಿಗೆ ಸಹಾಯವಾಗಲು ಶೇಕಡಾ 30 ರಷ್ಟು ಪಠ್ಯಕ್ರಮ ಕಡಿಮೆ ಮಾಡಲಾಗಿದೆ. 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ಕೋವಿಡ್-ಸಂಬಂಧಿತ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದರೆ, ವಿದ್ಯಾರ್ಥಿಗಳು ಓದುವುದನ್ನೇ ಮರೆತು ಬಿಡುವುದಲ್ಲದೆ, ಅವರ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದರು.
ಇನ್ನು ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಕೊರೊನಾದ ತೀವ್ರತೆ ಕಡಿಮೆಯಾಗಲಿದೆ ಎಂದು ತಜ್ಙರು ಮಾಹಿತಿ ನೀಡಿದ್ದು, ಆ ನಿಟ್ಟಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ನಿಂದ ಏಪ್ರಿಲ್ ಕೊನೆಯ ವಾರವರೆಗು ನಡೆಸಲಾಗುವುದು ಎಂದರು.
ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮಾತನಾಡಿದ ಅವರು, ಕೆಲವು ಶಿಕ್ಷಕರು ಕಳೆದ ಎರಡು ಮೂರು ವರ್ಷಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಕೆಲವು ತಿಂಗಳ ಹಿಂದೆಷ್ಟೇ ಈ ಪ್ರಕರಣವನ್ನು ವಿಲೇವಾರಿ ಮಾಡಿತ್ತು. ನ್ಯಾಯಾಲಯ ಆದೇಶ ಹೊರಬಿದ್ದ ಕೂಡಲೆ ಶಿಕ್ಷಕರು ವರ್ಗಾವಣೆ ಕೇಳಲು ಆರಂಭಿಸಿದ್ದರು. ನ್ಯಾಯಾಲಯದ ಆದೇಶ ಹಾಗೂ ಶಿಕ್ಷಕರ ಬೇಡಿಕೆಗಳನ್ನು ಗೌರವಿಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದೆವು, ಆದರೆ ಶಿಕ್ಷಕರ ತೀವ್ರ ಕೊರತೆ ಇರುವ ಕಡೆಯಿಂದ ಶಿಕ್ಷಕರನ್ನು ಸ್ಥಳಾಂತರಿಸಲು ಸಾದ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಶೈಕ್ಷಣಿಕ ವರ್ಷ ಆರಂಭವಾದಾಗಲೇ ಆದೇಶ ಕೇಳಿಬಂದಿವೆ. 2023ರ ಶೈಕ್ಷಣಿಕ ವರ್ಷ ಆರಂಭದಲ್ಲಿ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದರು.