ಲಕ್ನೋ, ಜ 20 (DaijiworldNews/MS): ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಆಗಬಹುದು ಎಂದು ಪರೋಕ್ಷವಾಗಿ ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶುಕ್ರವಾರ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೇರೆಯವರ ಮುಖವನ್ನು ನೀವು ನೋಡುತ್ತೀದ್ದೀರಾ? ಕಾಂಗ್ರೆಸ್ ಪಕ್ಷದಿಂದ ಬೇರೆ ಮುಖ ಕಾಣಿಸುತ್ತಿದೆಯೇ, ಎಲ್ಲೆಡೆ ನೀವು ನನ್ನ ಮುಖವನ್ನು ನೋಡುತ್ತಿದ್ದೀರಿ ಎಂದು ಉತ್ತರಿಸುವ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಎಂಬುದನ್ನು ಪರೋಕ್ಷವಾಗಿ ಸುಳಿವು ನೀಡಿರುವುದಾಗಿ ವರದಿ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರವನ್ನು ಮುನ್ನಡೆಸುತ್ತಿರುವ ಮತ್ತು ಎಲ್ಲಾ ಸಂವಹನಗಳಲ್ಲಿ ಪಕ್ಷದ ಮುಖವಾಗಿರುವ ಪ್ರಿಯಾಂಕಾ ಗಾಂಧಿ, ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಯುವ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಈ ಸಂದರ್ಭದಲ್ಲಿ ಸಹೋದರ ರಾಹುಲ್ ಗಾಂಧಿ ಕೂಡಾ ಹಾಜರಿದ್ದರು.
ನೀವು(ಪ್ರಿಯಾಂಕಾ) ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಈ ಬಗ್ಗೆ ನಾವು ಈವರೆಗೂ ಏನನ್ನೂ ನಿರ್ಧರಿಸಿಲ್ಲ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.