ಬೆಂಗಳೂರು, ಜ 21 (DaijiworldNews/HR): ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಪ್ಯೂ ಹಾಗೂ ನೈಟ್ ಕರ್ಪ್ಯೂಗೆ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತ ಪಡಿಸಿದ್ದು, ಇದೀಗ ಸರ್ಕಾರ 2 ವಾರಗಳಿಗೆ ವೀಕೆಂಡ್ ಕರ್ಪ್ಯೂವನ್ನು ರದ್ದುಗೊಳಿಸಿದೆ.
ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ಕುರಿತ ತಜ್ಞರು, ಸಚಿವರ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ತೆರವುಗೊಳಿಸುವಂತೆ ಸರ್ಕಾರಕ್ಕೆ ತಜ್ಞರು ಶಿಫಾರಸು ಮಾಡಿದ್ದಾರೆ ಎನ್ನಲಾಗಿದ್ದು, ನೈಟ್ ಕರ್ಪ್ಯೂ ಮುಂದುವರಿಯಲಿದೆ.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೊರೊನಾ ನಿಯಂತ್ರಣ ಸಭೆಯನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಲಾಗುತ್ತಿದ್ದು, ಈ ಸಭೆಯಲ್ಲಿ ಕೊರೊನಾ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಸಚಿವ ಆರ್ ಅಶೋಕ್, ಡಾ.ಕೆ.ಸುಧಾಕರ್, ಅರಗ ಜ್ಞಾನೇಂದ್ರ ಸೇರಿದಂತೆ ವಿವಿಧ ತಜ್ಞರು ಭಾಗವಹಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರೋ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಜೊತೆಗೆ 3ನೇ ಅಲೆಯ ತೀವ್ರತೆ ಅಷ್ಟೇನು ಹೆಚ್ಚಾಗಿಲ್ಲ. ಒಂದು ವೇಳೆ ಹೆಚ್ಚಾದ್ರೆ, 3ನೇ ಅಲೆಯ ತೀವ್ರತೆ ವ್ಯಾಪಕವಾದ್ರೇ ಮತ್ತೆ ಕಠಿಣ ನಿಯಮಗಳನ್ನು ಜಾರಿಗೆ ತರಬಹುದು. ಹೀಗಾಗಿ ವೀಕೆಂಡ್ ಕರ್ಪ್ಯೂ ರದ್ದು ಪಡಿಸುವಂತೆ ಸಚಿವರು ಸೇರಿದಂತೆ, ತಜ್ಞರು ಇಂದಿನ ಸಭೆಯಲ್ಲಿ ಸಲಹೆ ನೀಡಿದ್ದಾರೆ.