ಬೆಂಗಳೂರು, ಜ. 19 (DaijiworldNews/SM): ಸಂಕಷ್ಟ ಸಂದರ್ಭದಲ್ಲಿ ಸರಕಾರ ಜನರ ಸಹಾಯಕ್ಕೆ ನಿಲ್ಲಬೇಕು. ಇದು ಸರಕಾರದ ಜವಾಬ್ದಾರಿಯಾಗಿದೆ. ಕೋವಿಡ್ ಹೆಚ್ಚಳ ಆಗುತ್ತಿರುವ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಸರಕಾರ ನೆರವಾಗಬೇಕಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸರಕಾರ ಅವರ ನೆರವಿಗೆ ಬರಬೇಕು. ಸಣ್ಣ ರೈತರಿಗೆ ಮಾರಾಟ ವ್ಯವಸ್ಥೆ, ಬೀದಿಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಬೇಕು. ವಿರೋಧ ಪಕ್ಷಗಳು ಹೇಳುತ್ತವೆ ಎಂದು ಸರಕಾರ ಮಾಡದೇ ಇರಬಾರದು. ಜನರ ಕಷ್ಟಕ್ಕೆ ಮಿಡಿಯದಿದ್ದರೆ ಸರಕಾರ ಇರುವುದು ಏತಕ್ಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸರಕಾರ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಜೀವನದ ಬಗ್ಗೆಯೂ ಚಿಂತಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.