ಲಕ್ನೋ, ಜ 19 (DaijiworldNews/HR): ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬಿಜೆಪಿ ಪಕ್ಷಕ್ಕೆ ಇಂದು ಸೇರ್ಪಡೆಗೊಂಡಿದ್ದಾರೆ.
ಅಪರ್ಣಾ ಯಾದವ್ ಅವರು ಮುಲಾಯಂ ಸಿಂಗ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ. ಅಪರ್ಣಾ ಅವರು, 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಲಕ್ನೋ ಕ್ಯಾಂಟ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಇನ್ನು ಸಮಾಜವಾದಿ ಪಕ್ಷದಿಂದ ಈಗಾಗಲೇ ಹಲವಾರು ಮಂದಿ ಪಕ್ಷಾಂತರ ಮಾಡಿದ್ದು, ಈ ಮಧ್ಯೆ ಅಪರ್ಣಾ ಯಾದವ್ ಬಿಜೆಪಿಗೆ ಸೇರಿರುವುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮೇಲೆ ಪರಿಣಾಮ ಬೀರಲಿದೆ.
ಇತ್ತೀಚೆಗೆ, ಯೋಗಿ ಸಂಪುಟದಲ್ಲಿ ಸಚಿವರಾಗಿದ್ದ ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಂ ಸಿಂಗ್ ಸೈನಿ ಅವರು ಇತರ ಶಾಸಕರೊಂದಿಗೆ ತಮ್ಮ ಬೆಂಬಲಿಗರೊಂದಿಗೆ ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದರು.
ಇನ್ನು ಅಪರ್ಣಾ ಯಾದವ್ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಾರೆ ಎಂಬ ಭರವಸೆಯ ಮೇರೆಗೆ ಬಿಜೆಪಿಗೆ ಸೇರಿದ್ದಾರೆ ಎನ್ನಲಾಗಿದೆ.