ಪಣಜಿ, ಜ 19 (DaijiworldNews/KP): ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 22ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸಂಪೂರ್ಣ ಬಹುಮತದಿಂದ ಸರ್ಕಾರ ರಚನೆ ಮಾಡಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 14ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ಫಲಿತಾಂಶವು ಜನವರಿ 21ರಂದು ಪ್ರಕಟವಾಗಲಿದೆ. ಈ ಕುರಿತಂತೆ ಎಎನ್ಐ ಜೊತೆ ಪ್ರಮೋದ್ ಸಾವಂತ್ ಮಾತನಾಡಿದ್ದು, ಇದೇ ಮೊದಲ ಬಾರಿಗೆ ಬಿಜೆಪಿಯು ರಾಜ್ಯದ 40 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಅದರಲ್ಲಿ ಬಿಜೆಪಿಯು 22ಕ್ಕಿಂತ ಅಧಿಕ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವ ಗುರಿ ಹೊಂದಿದೆ ಎಂದರು.
ಇನ್ನು ರಾಜ್ಯದಲ್ಲಿ ಜಿಜೆಪಿ ಪಕ್ಷ 10 ವರ್ಷಗಳಿಂದ ಅಧಿಕಾರದಲ್ಲಿದ್ದು, ನಾನು ಕಳೆದ ಮೂರು ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದೇನೆ. ಗೋವಾದ ಜನರಿಗಾಗಿ ಬಿಜೆಪಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದಿದ್ದಾರೆ.
2017ರ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ, 17 ಸ್ಥಾನ ಗೆದ್ದು ದೊಡ್ಡ ಪಕ್ಷ ಕಾಂಗ್ರೆಸ್ ಕೂಡ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು. ಆದರೆ ಬಿಜೆಪಿ 13 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡಿತ್ತು, ಜನರಿಗೆ ನಮ್ಮ ಪಕ್ಷದ ಮೇಲೆ ನಂಬಿಕೆ ಇದೆ ನಾವು ರಾಜ್ಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಗೋವಾದ ಜನರು ಇದರಿಂದ ಸಂತಸರಾಗಿದ್ದು, ಈ ಸಲವೂ ಜನರು ನಮ್ಮ ಕೈಬೀಡುವುದಿಲ್ಲ ಬಿಜೆಪಿಗೆ ಮತದಾನ ಮಾಡಲಿದ್ದಾರೆ ಎಂದು ತಮ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.