ಬೆಳಗಾವಿ, ಜ 16 (DaijiworldNews/MS): ಎರಡು ದಿನಗಳ ಹಿಂದೆಯಷ್ಟೇ ಚುಚ್ಚುಮದ್ದು ಪಡೆದಿದ್ದ ಮೂರು ಶಿಶುಗಳು ನಿಗೂಢವಾಗಿ ಸಾವನ್ನಪ್ಪಿವೆ.
ಬೆಳಗಾವಿಯ ರಾಮದುರ್ಗ ತಾಲೂಕಿನ 13 ತಿಂಗಳ ಪವಿತ್ರಾ ಹುಲಗುರ್, ಒಂದು ವರ್ಷ ಎರಡು ತಿಂಗಳ ಮಧು ಉಮೇಶ್ ಕುರಗಂದಿ ಹಾಗೂ ಒಂದೂವರೆ ವರ್ಷದ ಚೇತನಾ ಪೂಜಾರಿ ಎಂಬ ಮೂವರು ಎಳೆ ಮಕ್ಕಳು ಸಾವನ್ನಪ್ಪಿದ್ದಾರೆ.
ಮಲ್ಲಾಪುರ ಗ್ರಾಮದಲ್ಲಿ ಜ. 11ರಂದು ಚುಚ್ಚುಮದ್ದು ನೀಡಿರುವ ನಾಲ್ಕು ಶಿಶುಗಳ ಪೈಕಿ ಒಂದು ಮಗು ಮೃತಪಟ್ಟಿದ್ದು, ಜ. 12ರಂದು ಬೋಚಬಾಳ ಗ್ರಾಮದಲ್ಲಿ 21 ಮಕ್ಕಳಿಗೆ ಚುಚ್ಚುಮದ್ದು ನೀಡಿದ್ದು, ಅದರಲ್ಲಿ ಇಬ್ಬರು ಕಂದಮ್ಮಗಳು ಅಸುನೀಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ
ಮಕ್ಕಳು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಚುಚ್ಚುಮದ್ದಿನ ಬಳಿಕ ವಾಂತಿ ಭೇದಿಯಿಂದ ಬಳಲುತ್ತಿದ್ದ ಮಕ್ಕಳನ್ನು 3 ದಿನಗಳ ಹಿಂದೆ ಬೆಳಗಾವಿಯ ಭೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಭಾನುವಾರ ಮುಂಜಾನೆ ದಿಢೀರನೆ ನಿಗೂಢ ರೀತಿಯಲ್ಲಿ ಮೃತಪಟ್ಟಿವೆ.