ಲಕ್ನೋ 16 (DaijiworldNews/HR): ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ್ ಅವರನ್ನು ಶನಿವಾರ ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಯತಿ ನರಸಿಂಹಾನಂದ್ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯ ನಂತರ ಕಸ್ಟಡಿಗೆ ತೆಗೆದುಕೊಳ್ಳಲಾದ ಎರಡನೇ ವ್ಯಕ್ತಿಯಾಗಿದ್ದು,ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಅವರು ದ್ವೇಷ ಭಾಷಣ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೊದಲ ಆರೋಪಿಯಾಗಿದ್ದಾರೆ.
ಡಿಸೆಂಬರ್ 17 ರಿಂದ 20 ರವರೆಗೆ ನಡೆದ ಕಾರ್ಯಕ್ರಮದಲ್ಲಿ ಮಾಡಿದ ದ್ವೇಷ ಭಾಷಣದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದ್ವೇಷ ಭಾಷಣದ ವಿರುದ್ಧ ಅನೇಕರ ವಿರೋಧ ವ್ಯಕ್ತವಾಗಿತ್ತು.
ಇನ್ನು ಮಾಜಿ ಮಿಲಿಟರಿ ಮುಖ್ಯಸ್ಥರು, ನಿವೃತ್ತ ನ್ಯಾಯಾಧೀಶರು, ಕಾರ್ಯಕರ್ತರು ಮತ್ತು ಅಂತಾರಾಷ್ಟ್ರೀಯ ಟೆನಿಸ್ ತಾರೆ ಮಾರ್ಟಿನಾ ನವ್ರಾಟಿಲೋವಾ ಅವರಿಂದಲೂ ತೀವ್ರ ಟೀಕೆಗೆ ಗುರಿಯಾಗಿದ್ದು, ಕೂಡಲೇ ಕ್ಷಮೆ ಯಾಚಿಸುವಂತೆ ಒತ್ತಡಗಳನ್ನು ಹೇರಲಾಗಿತ್ತು. ಆದರೆ ಕಾರ್ಯಕ್ರಮವನ್ನು ಆಯೋಜಿಸಿದವರು ಮತ್ತು ದ್ವೇಷದ ಭಾಷಣಗಳನ್ನು ನೀಡಿದವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.