ನವದೆಹಲಿ, ಜ 16 (DaijiworldNews/MS): ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ಭಾರತದಲ್ಲಿ ತನ್ನ ಮಹತ್ವಾಕಾಂಕ್ಷೆಯ ಆರಂಭಿಸಲಾದ ಕೋವಿಡ್ ಲಸಿಕಾ ಅಭಿಯಾನಕ್ಕೆ ಇಂದಿಗೆ ಒಂದು ವರ್ಷ. ಈ ಒಂದು ವರ್ಷದಲ್ಲಿ 156 ಕೋಟಿ ಡೋಸ್ ಲಸಿಕೆ ವಿತರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಸರಿಯಾಗಿ ಒಂದು ವರ್ಷದ ಹಿಂದೆ ಜ. 16 ರಂದು ವಾಕ್ಸಿನ್ ಡ್ರೈವ್ನ ಮೊದಲ ಹಂತವಾಗಿ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ದೇಶವು ತನ್ನ ವ್ಯಾಕ್ಸಿನೇಷನ್ ಗುರಿಗಳನ್ನು ಸಾಧಿಸಲು ಹೊರಟಿತು.
ಶನಿವಾರದವರೆಗೆ ದೇಶಾದ್ಯಂತ ಒಟ್ಟು 156.37 ಕೋಟಿ ಡೋಸ್ಗಳನ್ನು ನೀಡಲಾಗಿದೆ. ವಯಸ್ಕ ಜನಸಂಖ್ಯೆಯ ಶೇಕಡಾ 70 ಕ್ಕಿಂತ ಹೆಚ್ಚು ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅಂದರೆ 65 ಕೋಟಿಗೂ ಹೆಚ್ಚು ಲಸಿಕೆಯ ಫಲಾನುಭವಿಗಳನ್ನು ದೇಶ ಹೊಂದಿದೆ.
ಲಸಿಕಾ ಅಭಿಯಾನದಲ್ಲಿ ಭಾರತವು ಮೈಲಿಗಲ್ಲುಗಳನ್ನು ಸಾಧಿಸಿದ ನಡುವೆಯೂ 1.38 ಶತಕೋಟಿ ಜನಸಂಖ್ಯೆಗೆ ಲಸಿಕೆ ಹಾಕುವ ಪ್ರಯತ್ನದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದೆ. ದೇಶದ ಮೂಲೆ- ಮೂಲೆ ಕುಗ್ರಾಮದ ಜನರಿಗೂ ಲಸಿಕೆ ತಲುಪಿಸುವುದು, ಲಸಿಕೆ ಬಗ್ಗೆ ನಾಗರಿಕರಲ್ಲಿದ್ದ ತಪ್ಪು ಆಭಿಪ್ರಾಯ ದೂರಮಾಡುವುದು, ಸ್ಥಳೀಯ ಕೋವಾಕ್ಸಿನ್ ಅನ್ನು ಕಂಡುಹಿಡಿಯುವುದರಿಂದ ಹಿಡಿದು ಅದನ್ನು ಜಗತ್ತಿಗೆ ಪರಿಚಯಿಸುವವರೆಗೆ, ವಿನಾಶಕಾರಿ ರೂಪಾಂತರಿ ಡೆಲ್ಟಾ ಎರಡನೇ ಅಲೆಯ ವಿರುದ್ಧ ಹೋರಾಟ, ಒಮಿಕ್ರಾನ್ ರೂಪಾಂತರದ ಮೂರನೇ ಅಲೆಗೆ , ಮೂರನೇ 'ಮುನ್ನೆಚ್ಚರಿಕಾ' ಡೋಸ್ ನೀಡುವವರೆಗೆ ಪ್ರತಿಯೊಂದು ಸವಾಲುಗಳನ್ನು ದಿಟ್ಟವಾಗಿ ಎದುರಿಸಿದೆ.
ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರ ಮೂಲಕ ಆರಂಭಗೊಂಡ ಅಭಿಯಾನ ಬಳಿಕ 65 ವರ್ಷ ಮೇಲ್ಪಟ್ಟವರು, ವಿವಿಧ ಆರೋಗ್ಯ ಸಮಸ್ಯೆಯಿಂದ ಮೇಲ್ಪಟ್ಟವರಿಗೆ ವಿಸ್ತರಿಸಲಾಯಿತು. ನಂತರ 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡಿಕೆ ಆರಂಭವಾಯಿತು. ಇನ್ನು ಕಳೆದ ಜ.3ರಿಂದ 15-18ರ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಜ.10ರಿಂದ ಮುಂಜಾಗ್ರತಾ ಲಸಿಕೆಯನ್ನು ನೀಡಲಾಗುತ್ತಿದೆ.