ಚಂಡೀಗಢ, ಜ 16 (DaijiworldNews/MS): ಪಂಚ ರಾಜ್ಯಗಳಲ್ಲಿ ಚುನಾವಣಾ ಅಬ್ಬರ ಸಮೀಪಿಸುತ್ತಿರುವಂತೆಯೇ, ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ.
ಜನವರಿ 13 ರಂದು ಚನ್ನಿ ಅವರು ಬರೆದ ಪತ್ರದಲ್ಲಿ, ಈ ವರ್ಷ ಫೆಬ್ರವರಿ 14 ರಿಂದ ಪ್ರಾರಂಭವಾಗಲಿರುವ ಪಂಜಾಬ್ ವಿಧಾನಸಭಾ ಚುನಾವಣೆ 2022 ಅನ್ನು ಕನಿಷ್ಠ ಆರು ದಿನಗಳವರೆಗೆ ಮುಂದೂಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರಿಗೆ ಸಿಎಂ ಚನ್ನಿ ಪತ್ರ ಬರೆದಿದ್ದು, ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ಚನ್ನಿ ಅವರು ಈ ಮನವಿ ಮಾಡಿಕೊಂಡಿದ್ದಾರೆ.
ಗುರು ರವಿದಾಸ್ ಅವರ ಜನ್ಮ ದಿನಾಚರಣೆಯ ಸಂದರ್ಭ, ಪರಿಶಿಷ್ಟ ಜಾತಿ ಸಮುದಾಯವು (ಸುಮಾರು 20 ಲಕ್ಷ ಮಂದಿ) ಫೆ. 10ರಿಂದ 16ರವರೆಗಿನ ಅವಧಿಯಲ್ಲಿ ಉತ್ತರ ಪ್ರದೇಶದ ಬನಾರಸ್ಗೆ ಭೇಟಿ ನೀಡುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಮುದಾಯದ ಅನೇಕ ಜನರು ರಾಜ್ಯ ವಿಧಾನಸಭೆಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಹೀಗಾಗಿ ಅವರಿಗೂ ಮತದಾನದ ಅವಕಾಶ ಕಲ್ಪಿಸುವ ಸಲುವಾಗಿ ಚುನಾವಣೆಯನ್ನು ಮುಂದೂಡಬೇಕು ಎಂದಿ ಚನ್ನಿ ಕೇಳಿಕೊಂಡಿದ್ದಾರೆ.
ಪಂಜಾಬ್ನ 117 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 14ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.