ಬೆಂಗಳೂರು, ಜ 15 (DaijiworldNews/HR): ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯದ ಜನರಿಗೆ ಆಸ್ಪತ್ರೆಗೆ ದಾಖಲಾಗಲು ರಾಜ್ಯ ಸರ್ಕಾರದಿಂದ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಕಡ್ಡಾಯವಾಗಿ ಈ ನಿಯಮಗಳನ್ನು ಪಾಲನೆ ಮಾಡಲು ಸೂಚನೆ ನೀಡಲಾಗಿದೆ.
ತುರ್ತು ಆರೈಕೆ, ಚಿಕಿತ್ಸೆ ಅಗತ್ಯವಿದ್ದರಷ್ಟೆ ಆಸ್ಪತ್ರೆಗಳಿಗೆ ತೆರಳಬೇಕು. ಸೌಮ್ಯ ಲಕ್ಷಣಗಳಿದ್ದರೆ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸಲಹೆ ನೀಡಲಾಗಿದ್ದು,ಮುಂದಿನ 2 ವಾರದವರೆಗೆ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಆಸ್ಪತ್ರೆಗಳಲ್ಲಿ ಜನದಟ್ಟಣೆ ತಪ್ಪಿಸುವುದಕ್ಕಾಗಿ ಈ ನಿಯಮವನ್ನು ಜಾರಿಗೊಳಿಸಲಾಗಿದೆ.
ಇನ್ನು ಹೊರರೋಗಿ ವಿಭಾಗಕ್ಕೆ ಬರುವವರಲ್ಲಿ ಹೆಚ್ಚೆಚ್ಚು ಸೋಂಕು ಪತ್ತೆ ಆಗುತ್ತಿದ್ದು, ಹೊರರೋಗಿ ವಿಭಾಗದಲ್ಲಿ ಜನ ಗುಂಪು ಸೇರದಂತೆ ಎಚ್ಚರವಹಿಸಿ ಎಂದು ಖಾಸಗಿ ಆಸ್ಪತ್ರೆಗಳಿಗೂ ರಾಜ್ಯ ಸರ್ಕಾರದಿಂದ ಸೂಚನೆ ಹೊರಡಿಸಲಾಗಿದೆ.