ಬೆಂಗಳೂರು, ಜ 15 (DaijiworldNews/PY): "ಲಸಿಕಾಕರಣದಿಂದ ಮಾತ್ರ ಕೊರೊನಾದಿಂದ ದೂರವಿರಲು ಸಾಧ್ಯ. ಹಾಗಾಗಿ ಕಡ್ಡಾಯವಾಗಿ ಎಲ್ಲರೂ ಕೊರೊನಾ ಲಸಿಕೆ ಪಡೆಯಬೇಕು" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಕೊರೊನಾ ಮೂರನೇ ಲಸಿಕೆ ಪಡೆದಿದ್ದಾರೆ. 9 ತಿಂಗಳ ಹಿಂದೆ ಅವರು ಎರಡು ಡೋಸ್ ಪಡೆದಿದ್ದರು" ಎಂದು ಹೇಳಿದ್ದಾರೆ.
"ಈವರೆಗೆ ಬಿಎಂಸಿಆರ್ಐನಲ್ಲಿ 83,937 ಡೋಸ್ಗಳನ್ನು ನೀಡಲಾಗಿದೆ. ಇದರಲ್ಲಿ 420 ಬಾಣಂತಿ, 1,179 ಗರ್ಭಿಣಿಯರಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಅರ್ಹರು ಮುನ್ನೆಚ್ಚರಿಕಾ ಲಸಿಕೆಯನ್ನು ಪಡೆಯಬೇಕು. ಲಸಿಕಾಕರಣದಿಂದಲೇ ರಕ್ಷಣೆ ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಅದನ್ನೇ ಹೇಳಿದ್ದಾರೆ. ಕಡ್ಡಾಯವಾಗಿ ಎಲ್ಲರೂ ಲಸಿಕೆ ಪಡೆಯೋಣ" ಎಂದಿದ್ದಾರೆ.