ನವದೆಹಲಿ, ಜ 15 (DaijiworldNews/HR): ಆರ್ಎಸ್ಎಸ್ ಮುಸ್ಲಿಂ ವಿಭಾಗವು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮನವಿ ಮಾಡಿದ್ದು, ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತ ಮತ್ತು ಸಂತೋಷದಿಂದ ಇದ್ದಾರೆ ಎಂದು ಆರ್ಎಸ್ಎಸ್ ಮುಸ್ಲಿಂ ವಿಭಾಗದ ರಾಷ್ಟ್ರೀಯ ಸಂಚಾಲಕ ಸಯ್ಯದ್ ಸಯೀದ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಮನವಿ ಪತ್ರವನ್ನು ಆರ್ಎಸ್ಎಸ್ ಮುಸ್ಲಿಂ ವಿಭಾಗ ಮುಖ್ಯ ಪೋಷಕ ಇಂದ್ರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಯ್ಯದ್ ಸಯೀದ್, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್ನಲ್ಲಿ ಬಿಜೆಪಿಗೆ ಮತಯಾಚಿಸಿ ಅಲ್ಪಸಂಖ್ಯಾತ ಸಮುದಾಯದವರಿಗೆ ಕರಪತ್ರಗಳನ್ನು ಹಂಚಲಾಗುವುದು ಎಂದರು.
ಇನ್ನು ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಸೇರಿದಂತೆ ಉಳಿದ ಪಕ್ಷಗಳು ಮುಸ್ಲಿಮರನ್ನು ತಮ್ಮ ಮತಬ್ಯಾಂಕ್ ಎಂದು ಪರಿಗಣಿಸಿವೆ. ಆ ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದು, ನಮ್ಮ ಸಮುದಾಯದ ಬಡತನ, ಅನಕ್ಷರತೆ, ಹಿಂದುಳಿದಿರುವಿಕೆ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ದೇಶದಿಂದ ಹೊರಹಾಕಲಾಗುವುದು ಎಂದು ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ ಸೇರಿದಂತೆ ವಿರೋಧ ಪಕ್ಷಗಳು ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು, ಈ ಏಳು ವರ್ಷಗಳಿಂದ ಎಷ್ಟು ಮುಸ್ಲಿಮರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಪ್ರಶ್ನಿಸಿದ್ದಾರೆ.