ನವದೆಹಲಿ, ಜ 15 (DaijiworldNews/MS): ದೇಶದ ರಾಜಕೀಯ ಇತಿಹಾಸವನ್ನು ಬರೆಯಲಿರುವ ಅತೀದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶ ಏಳು ಹಂತದ ಚುನಾವಣೆಗೆ ಸಿದ್ಧವಾಗುತ್ತಿದೆ,. ಈ ನಡುವೆ ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನವದೆಹಲಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭವ್ಯ ಶ್ರೀರಾಮಮಂದಿರ ತಲೆಎತ್ತಲಿರುವ ಅಯೋಧ್ಯೆಯಿಂದ ಅಥವಾ ಮಥುರಾ ದಿಂದ ಚುನಾವಣೆಗೆ ಸ್ಪರ್ಧೆ ಮಾಡುವ ವದಂತಿಗಳು ಕೇಳಿಬಂದಿತ್ತು. ಆದರೆ ಇದು ಸಿಎಂ ಯೋಗಿ ತಮ್ಮ ಸ್ವಕ್ಷೇತ್ರ ಗೋರಖ್ ಪುರದಿಂದಲೇ ಸ್ಪರ್ಧಿಸಲಿದ್ದಾರೆ. ಮೊದಲಬಾರಿ ವಿಧಾನಸಭೆಗೆ ಯೋಗಿ ಸ್ಪರ್ಧಿಸುತ್ತಿದ್ದಾರೆ.
ದೀರ್ಘ ಸಮಾಲೋಚನೆಯ ನಂತರ ಪಕ್ಷದ ಉನ್ನತ ನಾಯಕತ್ವವು ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ವಾರ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಮೂವರು ಸಚಿವರು ಸೇರಿದಂತೆ ಉತ್ತರ ಪ್ರದೇಶದ 10 ಶಾಸಕರು ಹೊರನಡೆದ ನಂತರ ಬಿಜೆಪಿ ಆಂತರಿಕ ಭಿನ್ನಾಭಿಪ್ರಾಯವನ್ನು ಎದುರಿಸುತ್ತಿದೆ.
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆ 2017ರ ಚುನಾವಣೆಯಲ್ಲಿ 312 ಕ್ಷೇತ್ರಗಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ, ಯಾರೊಬ್ಬರೂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಸಣ್ಣ ನಿರೀಕ್ಷೆಯನ್ನೂ ಮಾಡಿರಲಿಲ್ಲ. ಆದರೆ, ಅಚ್ಚರಿಯ ಆಯ್ಕೆ ಹೊರಡಿಸಿದ್ದ ಬಿಜೆಪಿ ಹೈಕಮಾಂಡ್, ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಆಗಿ ಘೋಷಣೆ ಮಾಡಿತ್ತು.