ನವದೆಹಲಿ, ಜ 15 (DaijiworldNews/PY): "ಮುಂದಿನ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ" ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಅಖಿಲೇಶ್ ಯಾದವ್ಗೆ ದಲಿತರ ಬೆಂಬಲ ಬೇಕಾಗಿಲ್ಲ. ಬದಲಾಗಿ ಅವರಿಗೆ ದಲಿತ್ ವೋಟ್ ಬ್ಯಾಂಕ್ ರಾಜಕಾರಣ ಬೇಕಾಗಿದೆ" ಎಂದು ದೂರಿದ್ದಾರೆ.
"ಅಖಿಲೇಶ್ ಜೊತೆ ಸುಮಾರು ಒಂದು ತಿಂಗಳ ಕಾಲ ಮೈತ್ರಿಗಾಗಿ ಚರ್ಚೆ ನಡೆಸಿದ್ದೆ. ಅದು ಸಾಧ್ಯವಾಗಿಲ್ಲ. ಹಾಗಾಗಿ, ಅವರೊಂದಿಗೆ ಎಲ್ಲಾ ಚರ್ಚೆ ಮುಗಿದಿದೆ" ಎಂದಿದ್ದಾರೆ.
ಅಖಿಲೇಶ್ ಆಜಾದ್ ಸಮಾಜ್ ಪಕ್ಷಕ್ಕೆ ಮೂರು ಕ್ಷೇತ್ರಗಳನ್ನು ನೀಡುವ ಕುರಿತು ಆಫರ್ ನೀಡಿದ್ದರು. ಆದರೆ, ತಮಗೆ 10 ಸ್ಥಾನ ನೀಡಬೇಕು ಎಂದು ಚಂದ್ರಶೇಖರ್ ಆಜಾದ್ ಒತ್ತಾಯಿಸಿದ್ದರು. ಈ ಹಿನ್ನೆಲೆ ಮೈತ್ರಿ ಮಾಡುಕೊಳ್ಳುವುದಿಲ್ಲ ಎಂದಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಏನೇ ಆದರೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಚುನಾವಣೆಯಲ್ಲಿ ಗೆಲ್ಲಲು ಅವಕಾಶ ನೀಡುವುದಿಲ್ಲ ಎಂದು ಹೇಳಿರುವುದಾಗಿ ವರದಿ ಹೇಳಿದೆ.