ರಾಂಚಿ , ಜ 15 (DaijiworldNews/MS): ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ಪ್ರಕರಣದ ಹಿಂದಿನ ಷಡ್ಯಂತ್ರ ಬಯಲಿಗೆ ಎಳೆಯಬೇಕು ಎಂದು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಸಿಬಿಐಗೆ ತಾಕೀತು ಮಾಡಿದೆ.
ಮೊಬೈಲ್ ಕಸಿಯುವ ಪ್ರಯತ್ನದಲ್ಲಿ ಆಟೋ ರಿಕ್ಷಾಕ್ಕೆ ಬಡಿದು ಮೃತಪಟ್ಟಿರಬೇಕು ಎಂಬ ಸಿಬಿಐ ಸಿದ್ದಾಂತವನ್ನು ತಳ್ಳಿ ಹಾಕಿದ ಮುಖ್ಯನ್ಯಾಯಮೂರ್ತಿ ಡಾ.ರವಿರಂಜನ್ ನೇತೃತ್ವದ ವಿಭಾಗೀಯ ಪೀಠವು ಮೊಬೈಲ್ ಫೋನ್ ಕಳ್ಳತನ ಅಥವಾ ಇನ್ನಾವುದೇ ಕಾರಣಗಳಿಗಾಗಿ ಈ ಕೊಲೆ ನಡೆದಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.
ಅಲ್ಲದೆ ತನಿಖೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಿಬಿಐ ಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಈ ಸಾವಿನ ಹಿಂದೆ ದೊಡ್ಡ ಸಂಚು ಇದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ ಪ್ರಕರಣ ಸಂಬಂಧ ಬಂಧಿಸಿರುವ ಇಬ್ಬರು ಆರೋಪಿಗಳಿಗೆ ನಡೆಸಿದ ಮಂಪರು ಪರೀಕ್ಷೆ ವರದಿ ಹಾಜರುಪಡಿಸಬೇಕು ಎಂದೂ ಸೂಚಿಸಿ ವಿಚಾರಣೆಯನ್ನು ಜ. 21ಕ್ಕೆ ಮುಂದೂಡಲಾಗಿದೆ.
ಜುಲೈ 28ರಂದು ನ್ಯಾಯಾಧೀಶ ಉತ್ತಮ್ ಆನಂದ್ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಟೋವೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೊಂದು ಅಪಘಾತ ಎಂದು ಮೊದಲು ನಂಬಲಾಗಿತ್ತು. ಆದರೆ, ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದಾಗ ಇದು ಪೂರ್ವನಿರ್ಧರಿತ ಕೊಲೆ ಎಂಬುದು ಖಚಿತವಾಗಿತ್ತು.