ಕೇರಳ, ಜ 14 (DaijiworldNews/HR): ಕೊರೋನಾ ಮತ್ತು ಒಮಿಕ್ರಾನ್ ಹೆಚ್ಚಳದ ಹಿನ್ನಲೆಯಲ್ಲಿ ಕೇರಳದಲ್ಲಿ ಜನವರಿ 21 ರಿಂದ ಕೇರಳದಲ್ಲಿ ಒಂದರಿಂದ ಒಂಭತ್ತನೇ ತನಕದ ಶಾಲೆಗಳು ಮುಚ್ಚಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಅವಲೋಕನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.
21 ರಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನಡೆಯಲಿದ್ದು, ಎರಡು ಫೆಬ್ರವರಿ ಎರಡನೇ ವಾರದ ತನಕ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಲಾಗಿದ್ದು, ಬಳಿಕ ಕೋವಿಡ್ ಸ್ಥಿತಿಗತಿಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಆದರೆ 10 ರಿಂದ 12 ನೇ ತರಗತಿ ತನಕ ಎಂದಿನಂತೆ ತರಗತಿ ನಡೆಯಲಿದೆ.
ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ನಿಯಂತ್ರಣ ಸದ್ಯಕ್ಕೆ ಅಗತ್ಯ ಇಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದ್ದು, ಕೋವಿಡ್ ಹೆಚ್ಚಳದ ಹಿನ್ನಲೆಯಲ್ಲಿ ಕ್ಲಸ್ಟರ್ ಗಳನ್ನು ಗುರುತಿಸಿ ನಿಯಂತ್ರಣ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಆದೇಶ ನೀಡಿದರು ಸರಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಗರ್ಭಿಣಿಯರಿಗೆ ವರ್ಕ್ ಪ್ರಂ ಹೋಂ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಇನ್ನು ಸರಕಾರಿ, ಸಾರ್ವಜನಿಕ ವಲಯ, ಸಹಕಾರಿ ಸಂಸ್ಥೆಗಳಲ್ಲಿ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಆನ್ಲೈನ್ ಆಗಿ ನಡೆಸಲು ನಿರ್ದೇಶನ ನೀಡಲಾಗಿದೆ.
ಟೆಸ್ಟ್ ಪಾಸಿಟಿವಿಟಿ 20 ಕ್ಕಿಂತ ಮೇಲಿನ ಜಿಲ್ಲೆಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಅಲ್ಲದೆ ವಿವಾಹ, ಮರಣಾನಂತರ ಕಾರ್ಯಕ್ರಮಗಳಿಗೆ 50 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವುದಾದರೆ ಅನುಮತಿ ಪಡೆಯಬೇಕು. ಟೆಸ್ಟ್ ಪಾಸಿಟಿವಿಟಿ 30 ದಾಟಿದ್ದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ. ಎಲ್ಲಾ ವ್ಯಾಪಾರ ಮಳಿಗೆಗಳಲ್ಲಿ ಆನ್ಲೈನ್ ಮಾರಾಟ ಹಾಗೂ ಬುಕ್ಕಿಂಗ್ಗೆ ಆದ್ಯತೆ ನೀಡಬೇಕು. ಮಾಲ್ ಗಳಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಜನರಿಗೆ ಪ್ರವೇಶ ನೀಡಬೇಕು ಎಂದು ತಿಳಿಸಲಾಯಿತು.
10,11, 12 ನೇ ತರಗತಿ ಯ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ತೆರಳಿ ವ್ಯಾಕ್ಸಿನ್ ನೀಡಲು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಮುಂದಾಗುವಂತೆ ಮುಖ್ಯಮಂತ್ರಿ ಸಲಹೆ ನೀಡಿದರು.