ನವದೆಹಲಿ, ಜ 14 (DaijiworldNews/PY): "ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಅಳವಡಿಸಿರುವ ಟೆಸ್ಟಿಂಗ್, ಟ್ರ್ಯಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರದ ಅಳವಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಪಡಿಸಿದ್ದಾರೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
"ಫೆಬ್ರವರಿಯಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಾಗುವ ನಿರೀಕ್ಷೆ ಇದೆ. ಮೊದಲ ಹಾಗೂ ಎರಡನೇ ಅಲೆಯನ್ನು ಎದುರಿಸುವ ಅನುಭವದ ಆಧಾರದಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ" ಎಂದಿದ್ದಾರೆ.
"ಕೊರೊನಾದ ಮೂರನೇ ಅಲೆಯನ್ನು ಸರ್ಮಥವಾಗಿ ನಿಭಾಯಿಸಲು ರಾಜ್ಯದಲ್ಲಿ ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆಗಳು ಹಾಗೂ ಆಮ್ಲಜನಕ ಘಟಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರದ ನೆರವು ಕೋರಲಾಗಿದೆ" ಎಂದು ತಿಳಿಸಿದ್ದಾರೆ.
"ಮೂರನೇ ಅಲೆಯ ವೇಳೆ ಶೇ.94ಕ್ಕೂ ಅಧಿಕ ಸೋಂಕಿತರು ಮನೆಗಳಲ್ಲಿ ಪ್ರತ್ಯೇಕ ವಾಸವಾಗಿದ್ದಾರೆ. ಹಾಗಾಗಿ ಅವರಿಗೆ ಧೈರ್ಯ, ಔಷಧ ಪೂರೈಕೆ ಸೇರಿದಂತೆ ಆರೈಕೆಗೆ ಆದ್ಯತೆ ನೀಡಬೇಕು" ಎಂದು ಹೇಳಿದ್ದಾರೆ.