ತುರುವೇಕೆರೆ, ಜ 14 (DaijiworldNews/AN): ದೂರುದಾರರು ಆರೋಪಿ ಸಿಕ್ಕಿದ್ದಾನೆ ಎಂದು ದೂರು ನೀಡಿ ನಾಲ್ಕೈದು ತಿಂಗಳಾಗಿದ್ದರೂ ಆತನನ್ನು ಬಂಧಿಸದೇ ಇದ್ದ ದಂಡಿನವರ ಠಾಣೆ ಪಿಎಸ್ಐ ಶಿವಲಿಂಗಯ್ಯಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ನೀಡಿರುವ ವಾರ್ನಿಂಗ್ ವ್ಯಾಪಕ ಚರ್ಚೆಗೆ ಒಳಗಾಗಿದೆ.
"ಆರೋಪಿಯನ್ನು ಬಂಧಿಸಬೇಕಾದರೆ, ಆತನನ್ನು ಕರೆತರಲು ಬಾಡಿಗೆ ಕಾರು ತನ್ನಿ" ಎಂಬ ಉತ್ತರ ಪಿಎಸ್ಐ ಶಿವಲಿಂಗಯ್ಯ ನೀಡಿದ್ದಾರೆ.
ಕಳೆದ ವರ್ಷ ಆಗಸ್ಟ್ 28ರಂದು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಾಗೇಂದ್ರಪ್ಪ ಹಾಗೂ ಪಕ್ಕದ ಮನೆಯ ಶಿವಪ್ರಕಾಶ್ ಮತ್ತು ಅವರ ಮಗ ಚಂದನ್ ರವರ ನಡುವೆ ಜಗಳಗಳಾಗಿತ್ತು.
ನಾಗೇಂದ್ರಪ್ಪ ಹಾಗೂ ಪತ್ನಿ ಶಿವಮ್ಮಗೆ ಚಂದನ ಮತ್ತು ಶಿವಪ್ರಕಾಶ್ ಹಿಗ್ಗಾಮುಗ್ಗಾ ಹಲ್ಲೆಗೈದಿದ್ದು, ನಾಗೇಂದ್ರಪ್ಪ ಮತ್ತು ಶಿವಮ್ಮಗೆ ಗಂಭೀರ ಗಾಯಗಳಾಗಿ ತುರುವೇಕೆರೆ ಆಸ್ಪತ್ರೆ ಹಾಗೂ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದರ ಕುರಿತು ವೈದ್ಯರು ಇದು ಮಾರಣಾಂತಿಕ ಹಲ್ಲೆ ಅಂತ ವರದಿ ತಿಳಿಸಿದ್ದರು. ಇದರ ಕುರಿತು ನಾಗೇಂದ್ರಪ್ಪ ದಂಡಿನಶಿವರ ಪೊಲೀಸ್ ಠಾಣೆ 307 ಕೊಲೆ ಪ್ರಯತ್ನ ಎಂದು ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸದೆ ಪಿಎಸ್ಐ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪಗಳು ಕೇಳಿಬಂದಿದೆ.
ಇದಾದ ಬಳಿಕ ಶಿವಪ್ರಕಾಶ್ಗೆ ಜಾಮೀನು ದೊರೆತಿದ್ದು, ಚಂದನ್ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಚಂದನ್ನನ್ನು ಬಂಧಿಸುವಂತೆ ದೂರುದಾರ ನಾಗೇಂದ್ರಪ್ಪ ಠಾಣೆಗೆ ಬಂದು ಪಿಎಸ್ಐ ಬಳಿ ಮನವಿ ಮಾಡಿಕೊಂಡಾಗ, "ಆರೋಪಿಯನ್ನು ಬಂಧಿಸೋಣ.. ನೀನೊಂದು ಬಾಡಿಗೆ ವಾಹನ ಮಾಡಿಕೊಂಡು ಬಾ" ಎಂದು ಪಿಎಸ್ಐ ಶಿವಲಿಂಗಯ್ಯ ಹೇಳಿದ್ದರು.
ತನಿಖೆಗೆ ಪದೇ ಪದೇ ಠಾಣೆಗೆ ಭೇಟಿ ನೀಡುತ್ತಿದ್ದ ನಾಗೇಂದ್ರಪ್ಪ ಪಿಎಸ್ಐ ವರ್ತನೆಗೆ ಬೇಸತ್ತು ಜನವರಿ 13ರ ಗುರುವಾರದಂದು ತುಮಕೂರಿಗೆ ಬಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಅವರನ್ನು ಭೇಟಿಯಾಗಿ ಕಣ್ಣೀರಿಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿದ ಎಸ್ಪಿ ನಾಗೇಂದ್ರಪ್ಪ ಮತ್ತು ಅವರ ಕಡೆಯವರನ್ನ ತನ್ನ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿ, ಬಳಿಕ ತಮ್ಮ ಕಾರು ಚಾಲಕನನ್ನು ಕರೆದು ಇವರನ್ನು ದಂಡಿನಶಿವರ ಪೊಲೀಸ್ ಠಾಣೆಗೆ ಬಿಟ್ಟು ಬಾ, ಹಾಗೂ ಆರೋಪಿಯನ್ನು ಬಂಧಿಸುವಂತೆ ಪಿಎಸ್ಐ ಅವರ ಬಳಿ ಹೇಳಿ ಎಂದು ನಾಗೇಂದ್ರಪ್ಪಗೆ ಹೇಳಿ ಕಳುಹಿಸಿದ್ದಾರೆ.
ಜೊತೆಗೆ ಪಿಎಸ್ಐ ಶಿವಲಿಂಗಯ್ಯಗೆ ದೂರವಾಣಿ ಕರೆ ಮಾಡಿ ರಾಹುಲ್ ಎಂಬ ಆರೋಪಿ ಎಲ್ಲಿದ್ದರೂ ನಾಳೆ ಬೆಳಗಾಗುವಷ್ಟರೊಳಗೆ ಆತನನ್ನು ಬಂಧಿಸಬೇಕು ಎಂದು ವಾರ್ನಿಂಗ್ ನೀಡಿದ್ದಾರೆ.