ಬೆಂಗಳೂರು, ಜ 14 (DaijiworldNews/PY): "ಕೊರೊನಾ ಸೋಂಕು ಫೆಬ್ರವರಿ ಮೊದಲ ವಾರ ಹೆಚ್ಚಾಗುತ್ತದೆ. 3-4ನೇ ವಾರದಿಂದ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ" ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಸೋಂಕು ಲಾಕ್ಡೌನ್ ಮೂಲಕ ನಿಯಂತ್ರಣ ಆಗುವುದಿಲ್ಲ. ಎರಡು ಬಾರಿ ಲಾಕ್ಡೌನ್ ಮಾಡಿ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಆರ್ಥಿಕ ಸಂಕಷ್ಟವಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಹಾಗಾಗಿ ಲಾಕ್ಡೌನ್ನಂತಹ ನಿಯಮ ಇಲ್ಲದೇ, ಅಗತ್ಯವಾದ ಕ್ರಮ ಕೈಗೊಳ್ಳಲು ಕೆಲಸ ಮಾಡುತ್ತೇವೆ" ಎಂದಿದ್ದಾರೆ.
"ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ. ಲಸಿಕೆ ತೆಗೆದುಕೊಳ್ಳಿ. ಎಂದೂವರೆ ತಿಂಗಳು ಎಚ್ಚರಿಕೆ ವಹಿಸಿ" ಎಂದು ತಿಳಿಸಿದ್ದಾರೆ.
"ಸದ್ಯ ಇರುವ ಮಾರ್ಗಸೂಚಿಯು ಜನವರಿ ತಿಂಗಳ ಕೊನೆಯವರೆಗೆ ಮುಂದುವರಿಯಲಿದೆ. ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಿ. ಎರಡನೇ ಡೋಸ್ ತೆಗೆದುಕೊಳ್ಳದವರು ತಪ್ಪದೇ ಡೋಸ್ ತೆಗೆದುಕೊಳ್ಳಿ" ಎಂದು ಮನವಿ ಮಾಡಿದ್ದಾರೆ.
"ಕಳೆದ ವಾರದಿಂದ ವೀಕೆಂಡ್ ಕರ್ಫ್ಯೂ ಮಾಡಿದ್ದೇವೆ. ಏಳೇ ದಿನಕ್ಕೆ ಸೋಂಕು ಕಡಿಮೆಯಾಗುವುದಿಲ್ಲ. ಈ ಸೋಂಕು 5-6 ಪಟ್ಟು ವೇಗವಾಗಿ ವ್ಯಾಪಿಸುತ್ತಿದ್ದು, ಇನ್ನು ಸ್ವಲ್ಪ ದಿನದಲ್ಲಿ ವೀಕೆಂಡ್ ಕರ್ಫ್ಯೂ ಫಲಿತಾಂಶ ಸಿಗಬಹುದು" ಎಂದಿದ್ದಾರೆ.