ಪಣಜಿ, ಜ 14 (DaijiworldNews/MS): ಕಾಂಗ್ರೆಸ್ ನಾಯಕರು ಭಾರತದ ಚಕ್ರವರ್ತಿಗಳಲ್ಲ, ಅವರು ಏರಿದ ಕುದುರೆಯಿಂದ ಕೆಳಗಿಳಿಯಬೇಕು ಎಂದು ಸಂಸದೆ ಹಾಗೂ ಎಐಟಿಸಿ ಗೋವಾ ಉಸ್ತುವಾರಿ ಮಹುವಾ ಯೊಯಿತ್ರಾ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಒಂದರಿಂದಲೇ ಸಾಧ್ಯವಿಲ್ಲ, ಗೋವಾದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ಬಿಜೆಪಿಯೇತರ ಪಕ್ಷಗಳು ಒಗ್ಗೂಡಬೇಕು ಕಾಂಗ್ರೆಸ್ ನಾಯಕರು 'ಭಾರತದ ಚಕ್ರವರ್ತಿ'ಗಳಲ್ಲ ಅದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
2017ರಲ್ಲಿ ಕಾಂಗ್ರೆಸ್ ಜನಾದೇಶ ಪಡೆದಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾದದ್ದನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಈಗಲೂ ಕೂಡಾ ಕಾಂಗ್ರೆಸ್ ಒಂದರಿಂದಲೇ ಬಿಜೆಪಿ ಮಣಿಸಲು ಸಾಧ್ಯವಿಲ್ಲ,ಗೋವಾದಲ್ಲಿ ಕಾಂಗ್ರೆಸ್ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಿದ್ದರೆ, ಬಿಜೆಪಿಯನ್ನು ಸೋಲಿಸಲು ಟಿಎಂಸಿ ಇಲ್ಲಿಗೆ ಬರುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಗೋವಾದಲ್ಲಿ ಮೈತ್ರಿಗೆ ಟಿಎಂಸಿ ಸಿದ್ಧವಾಗಿದೆ. ಏಕೆಂದರೆ ಬಿಜೆಪಿಯನ್ನು ಸೋಲಿಸುವುದು ಈ ಹೊತ್ತಿನ ಅಗತ್ಯ. ಆದರೆ ಕಾಂಗ್ರೆಸ್ ತನ್ನ ಕುದುರೆ ಮೇಲಿಂದ ಕೆಳಗೆ ಇಳಿಯಬೇಕು. ತನ್ನ ಶಕ್ತಿ ಕ್ಷೀಣಿಸಿರುವುದನ್ನು ಆ ಪಕ್ಷ ಅರಿಯಬೇಕು ಎಂದು ವ್ಯಂಗ್ಯವಾಡಿದ್ದಾರೆ.