ಶಿವಮೊಗ್ಗ, ಜ 14 (DaijiworldNews/PY): "ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯ ಸಿದ್ದರಾಮಯ್ಯ ಮೇಕೆದಾಟು ಪಾದಯಾತ್ರೆಯ ಮೂಲಕ ಸಿಎಂ ಆಗುವ ಕನಸು ಕಾಣುತ್ತಿದ್ದರು. ಆದರೆ, ಇದೀಗ ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಳ್ಳುವ ಮೂಲಕ ಸಿಎಂ ಆಗುವ ಅವರ ಕನಸು ಭಗ್ನವಾಗಿದೆ" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿ ಕೆ ಶಿವಕುಮಾರ್ ಅವರು ತಿಹಾರ್ ಜೈಲಿನಲ್ಲಿ ಇದ್ದು ಬಂದವರು, ಅವರಿಗೆ ನ್ಯಾಯಾಂದ ಶಕ್ತಿ ಏನು ಎಂದು ತಿಳಿದಿದೆ. ಹಾಗಾಗಿ ಕೈನಾಯಕರು ಮೇಕೆದಾಟು ಪಾದಯಾತ್ರೆಯನ್ನು ರದ್ದುಗೊಳಿಸಿದ್ದಾರೆ" ಎಂದಿದ್ದಾರೆ.
"ಕಾಂಗ್ರೆಸ್ಸಿಗರು ಹೈಕೋರ್ಟ್ನ ನಿರ್ದೇಶನದ ನಂತರ ಪಾದಯಾತ್ರೆಯನ್ನು ಮೊಟಕಗೊಳಿಸಿದ್ದಾರೆ. ಹಾಗಾಗಿ ಇದರಿಂದ ಸಿಎಂ ಆಗುವ ಇಬ್ಬರ ಕನಸು ನುಚ್ಚುನೂರಾಗಿದೆ. ಇವರು ಜನರ ಮೇಲಿನ ಕಾಳಜಿಯಿಂದಲ್ಲ ಬದಲಾಗಿ ಹೈಕೋರ್ಟ್ ಕ್ರಮ ತೆಗೆದುಕೊಳ್ಳುವ ಹೆದರಿಕೆಯಿಂದ ಪಾದಯಾತ್ರೆಯನ್ನು ರದ್ದುಪಡಿಸಿದ್ದಾರೆ" ಎಂದು ಹೇಳಿದ್ದಾರೆ.