ನವದೆಹಲಿ, ಜ 14 (DaijiworldNews/PY): ಗಣರಾಜ್ಯೋತ್ಸವ ಪರೇಡ್ಗೆ ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕೇರಳ ಕಳುಹಿಸಿದ್ದ ಶ್ರೀನಾರಾಯಣ ಗುರು ಹಾಗೂ ಜಟಾಯುಪ್ಪಾರದ ಪ್ರತಿಕೃತಿಗಳನ್ನು ಕೇಂದ್ರ ತಿರಿಸ್ಕರಿಸಿದ್ದು, ಆದಿ ಶಂಕರಾಚಾರ್ಯ ಪ್ರತಿಮೆ ಇಡಬೇಕು ಎಂದು ಸೂಚಿಸಿದೆ ಎಂದು ವರದಿ ಹೇಳಿದೆ.
ಮೊದಲ ತೇರಿನ ಮುಂಭಾಗದಲ್ಲಿ ಜಟಾಯುಪ್ಪಾರದ ದ್ವಾರದ ಮಾದರಿಯನ್ನು ಇಡಲು ನಿರ್ಧರಿಸಲಾಗಿತ್ತು. ಆದರೆ, ಶಂಕರಾಚಾರ್ಯರ ಪ್ರತಿಮೆಯನ್ನು ಮುಂಭಾಗದಲ್ಲಿ ಇಡಬೇಕು ಎಂದು ರಕ್ಷಣಾ ಸಚಿವಾಲಯ ಸೂಚನೆ ನೀಡಿತ್ತು. ಆದರೆ, ಬದಲಾವಣೆ ಅನಿವಾರ್ಯವಾಗಿದ್ದಲ್ಲಿ, ಅದರ ಬದಲಿಗೆ ಶ್ರೀನಾರಾಯಣ ಗುರುಗಳ ಪ್ರತಿಮೆ ಇಡುವುದಾಗಿ ಕೇರಳ ಸರ್ಕಾರ ಹೇಳಿದೆ ಎಂದು ವರದಿ ತಿಳಿಸಿದೆ.
ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳು ಎನ್ನುವ ವಿಚಾರವನ್ನು ಇದು ಆಧರಿಸಿದ್ದು, ಸ್ತಬ್ಧಚಿತ್ರಗಳನ್ನು ಮೌಲ್ಯಮಾಪನ ಮಾಡಲು ರಕ್ಷಣಾ ಸಚಿವಾಲಯ ನೇಮಕ ಮಾಡಿದ್ದ ತೀರ್ಪುಗಾರರು ಐದು ಸುತ್ತಿನ ಚರ್ಚೆಗಳಲ್ಲಿಯೂ ಸಕರಾತ್ಮಕವಾದ ಪ್ರತಿಕ್ರಿಯೆ ನೀಡಿದ್ದರು. ಡಿ.18ರಂದು ನಡೆದ ಅಂತಿಮ ಸುತ್ತಿನಲ್ಲಿ ಸ್ಕೆಚ್ ಅನ್ನು ಅನುಮೋದಿಸಿ, ಸಂಗೀತ ಸಂಯೋಜಿಸಲು ನಿರ್ದೇಶಿಸಿದ್ದರು.
ಅನುಮೋದನೆಗೊಂಡ 12 ರಾಜ್ಯಗಳ ಪಟ್ಟಿಯಲ್ಲಿ ಕೇರಳ ರಾಜ್ಯದ ಹೆಸರು ಇರಲಿಲ್ಲ ಎಂದು ತಿಳಿದುಬಂದಿದೆ. ಛತ್ತೀಸ್ಗಢ, ಹರಿಯಾಣ, ಅರುಣಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಗೋವಾ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಮೇಘಾಲಯ, ಉತ್ತರಪ್ರದೇಶ ಹಾಗೂ ಉತ್ತರಾಖಂಡದಿಂದ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
ಇದೀಗ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿರುವ ಚರ್ಚೆಗೆ ಗ್ರಾಸವಾಗಿದೆ. ಜನರು, ಒಕ್ಕೂಟ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿನೋದ್ ಜೋಸ್, "ದೆಹಲಿಯವೆರೆಗೆ ಬ್ರಾಹ್ಮಣ ಮಹಾತ್ಮ ಬೇಕಿತ್ತು. ಕೇರಳದವರು ಒಬಿಸಿಯ ಮಹಾತ್ಮರನ್ನು ಕಳುಹಿಸಿದರು. ಅದನ್ನು ದೆಹಲಿಯವರು ತಿರಸ್ಕರಿಸಿರು. ನಾವು ಇಲ್ಲಿ ಜಾತಿ ಸಮಸ್ಯೆ ಇಲ್ಲ ಎನ್ನುತ್ತೇವೆ" ಎಂದು ಹೇಳಿದ್ದಾರೆ.