ಬೆಂಗಳೂರು, ಜ 14 (DaijiworldNews/MS): ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ "ಮೀಟೂ" ಆರೋಪ ಪ್ರಕರಣ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಪೊಲೀಸರು ಬಿ-ರಿಪೋರ್ಟ್ ಅನ್ನು ಎಂಟನೇ ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿದೆ.
2018ರಲ್ಲಿ ಸಂತ್ರಸ್ತೆ ಶ್ರುತಿ ಅವರು ನೀಡಿದ್ದ ದೂರು ಆಧರಿಸಿ ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ (354,509) ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ ಅರ್ಜುನ್ ಸರ್ಜಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
2015 ರಲ್ಲಿ ಅರ್ಜುನ್ ಸರ್ಜಾ ರವರೊಂದಿಗೆ ವಿಸ್ಮಯ ಎಂಬ ಹೆಸರಿನ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಶೂಟಿಂಗ್ ಹೆಬ್ಬಾಳದ ರೆಸಿಡೆನ್ಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ವೇಳೆ ರೋಮ್ಯಾಂಟಿಕ್ ಸೀನ್ ರಿಹರ್ಸಲ್ ವೇಳೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಶ್ರುತಿ ಆರೋಪಿಸಿದ್ದರು. ಅರ್ಜುನ್ ಸರ್ಜಾ ಹಾಗೂ ಹಲವರನ್ನು ವಿಚಾರಣೆ ನಡೆಸಿದ್ದ ಕಬ್ಬನ್ ಪಾರ್ಕ್ ಪೊಲೀಸರು, 'ಆರೋಪ ಸಾಬೀತುಪಡಿಸುವ ಯಾವುದೇ ಪುರಾವೆಗಳು ಸಿಕ್ಕಿಲ್ಲ' ಎಂದು ಅಭಿಪ್ರಾಯಪಟ್ಟು ನ್ಯಾಯಾಲಯಕ್ಕೆ 'ಬಿ-ರಿಪೋರ್ಟ್' ಸಲ್ಲಿಸಿದ್ದರು.
ನೋಟಿಸ್ಗೆ ಪ್ರತಿಕ್ರಿಯಿಸದ ಶ್ರುತಿ: ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ 8ನೇ ಎಸಿಎಂಎಂ ನ್ಯಾಯಾಲಯ, ಬಿ-ರಿಪೋರ್ಟ್ ಸಲ್ಲಿಕೆಯಾದ ಬಗ್ಗೆ ಶ್ರುತಿ ಹರಿಹರನ್ ಅವರಿಗೆ ನೋಟಿಸ್ ನೀಡಿತ್ತು.ನೀವು ನೀಡಿದ್ದ ದೂರಿನಡಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪುರಾವೆಗಳಿಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆ. ಈ ಬಗ್ಗೆ ಬಿ-ರಿಪೋರ್ಟ್ ಸಹ ಸಲ್ಲಿಸಿದ್ದಾರೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ, ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಬಹುದು' ಎಂದು ನೋಟಿಸ್ನಲ್ಲಿ ತಿಳಿಸಲಾಗಿತ್ತು.
ನೋಟಿಸ್ ಸ್ವೀಕರಿಸಿದ್ದ ಶ್ರುತಿ ನ್ಯಾಯಾಲಯಕ್ಕೆ ಹಾಜರಾಗಿ ಯಾವುದೇ ಆಕ್ಷೇಪಣೆ ಸಲ್ಲಿಸದ ಕಾರಣ ಪೊಲೀಸರ ಬಿ-ರಿಪೋರ್ಟ್ ಅನ್ನು ನ್ಯಾಯಾಲಯ ಗುರುವಾರ ಮಾನ್ಯ ಮಾಡಿದೆ.