ಬೆಂಗಳೂರು, ಜ 14 (DaijiworldNews/MS): ಟಿಪ್ಪರ್ ಲಾರಿ - ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಖಾಸಗಿ ವಾಹಿನಿಯ ರಿಯಾಲಿಟಿ ಷೋ ʼನಮ್ಮಮ್ಮ ಸೂಪರ್ ಸ್ಟಾರ್ʼ ನ ಸ್ಪರ್ಧಿ ತನ್ನ ಮುದ್ದಾದ ಮಾತುಗಳಿಂದ ಮನೆ ಮಾತಾಗಿದ್ದ 6 ವರ್ಷದ ಬಾಲಕಿ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ತನ್ನ ತಾಯಿ ನಟಿ ಅಮೃತಾ ನಾಯ್ಡು ಅವರ ಜೊತೆ ಗುರುವಾರ ಸಂಜೆ ಸಮನ್ವಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಈ ದುರಂತ ಸಂಭವಿಸಿದೆ.
ಈ ಅಪಘಾತದಲ್ಲಿ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದರೆ, ತಾಯಿ ಅಮೃತಾ ನಾಯ್ಡು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಖ್ಯಾತ ಹರಿಕಥೆ ವಿದ್ವಾನ್ ಗುರುರಾಜುಲು ನಾಯ್ಡು ಅವರ ಮೊಮ್ಮಗಳಾಗಿದ್ದ ಸಮನ್ವಿಯ ದುರಂತ ಸಾವಿಗೆ ಕಿರುತೆರೆ ಹಾಗೂ ಚಿತ್ರರಂಗದ ಕಲಾವಿದರು ಕಣ್ಣೀರು ಮಿಡಿಯುತ್ತಿದ್ದಾರೆ.
ಅಮೃತಾ ನಾಯ್ಡು ಅವರ ಒಂದು ಮಗು ಈ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿತ್ತೆನ್ನಲಾಗಿದ್ದು, ಇದೀಗ ಮತ್ತೊಂದು ಮಗು ಅಪಘಾತದಲ್ಲಿ ತಾಯಿ ಕಣ್ಣೆದುರೇ ಸಾವನ್ನಪ್ಪಿರುವುದು ಕುಟುಂಬಕ್ಕೆ ದೊಡ್ಡ ಅಘಾತವನ್ನುಂಟು ಮಾಡಿದೆ. ಬಾಲಕಿ ಮೃತ ದೇಹ ಈಗ ಕಿಮ್ಸ್ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.