ಬೆಂಗಳೂರು, ಜ 13 (DaijiworldNews/PY): "ಡಿಕೆಶಿಯವರೇ, ಮೇಕೆದಾಟು ವಿಚಾರಕ್ಕೆ ಸಂಬಂಧಪಟ್ಟಂತೆ ಪಾದಯಾತ್ರೆಯಿಂದ ಪ್ರಯೋಜನವಿಲ್ಲ ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಿತ್ತು. ಆದರೂ ರಾಜ್ಯದ ಜನರ ಆರೋಗ್ಯವನ್ನು ಪಣಕ್ಕಿಟ್ಟು ಕೋವಿಡ್ ಜಾತ್ರೆ ನಡೆಸಿದಿರಿ. ಕೋವಿಡ್ ಹಬ್ಬಿಸಿರುವುದಕ್ಕೆ ಹೊಣೆ ಹೊರುವಿರಾ?" ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಕೋವಿಡ್ ಜಾತ್ರೆಯ ರೂವಾರಿ ಡಿಕೆಶಿ ಅವರೇ, ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು? ಎಷ್ಟು ಜನಕ್ಕೆ ಕೋವಿಡ್ ಟೆಸ್ಟ್ ನಡೆಸಿದ್ದೀರಿ? ಎಷ್ಟು ಜನರಲ್ಲಿ ಸೋಂಕು ತಗಲಿದೆ ಎಂಬ ಲೆಕ್ಕ ಕೊಡಿ? ಕೋವಿಡ್ ನಿಯಮಾವಳಿ ಎಂದರೆ ನಿಮ್ಮ ಪ್ರಕಾರ ಏನು?" ಎಂದು ಕೇಳಿದೆ.
"ಡಿಕೆಶಿ ಅವರೇ, ಇಂದು ನೀವು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದೀರಿ. ಆದರೆ, ಕೋವಿಡ್ ಪರೀಕ್ಷೆ ಇನ್ನೂ ಏಕೆ ಮಾಡಿಸಿಕೊಂಡಿಲ್ಲ? ನಿಮ್ಮ ಸುತ್ತಮುತ್ತಲಿದ್ದವರಿಗೆಲ್ಲಾ ಕೋವಿಡ್ ದೃಢಪಟ್ಟಿದೆ, ಕೋವಿಡ್ ಸೋಂಕನ್ನು ಕಡೆಗಣಿಸಿ ಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದೀರಿ?" ಎಂದು ಪ್ರಶ್ನಿಸಿದೆ.
"ಡಿಕೆಶಿ ಅವರೇ, ಪಾದಯಾತ್ರೆ ಹೆಸರಿನಲ್ಲಿ ನೀವು ಸೃಷ್ಟಿಸಿದ ಅವಾಂತರವಾದರೂ ಎಷ್ಟು? ಇದರಿಂದ ಸಾರ್ವಜನಿಕರಿಗಾದ ತೊಂದರೆಯ ಬಗ್ಗೆ ಕಲ್ಪಿಸಲು ಸಾಧ್ಯವೇ? ಪ್ರತಿಷ್ಠೆ ಮೆರೆಯುವುದಕ್ಕೆ ಶಾಲೆಗೆ ಭೇಟಿ ನೀಡಿದರಲ್ಲ, ಅಲ್ಲಿನ ವಿದ್ಯಾರ್ಥಿಗಳು ಈಗ ಕಾಂಗ್ರೆಸ್ ವೈರಸ್ ಭಯದಲ್ಲಿ ಬದುಕಬೇಕಲ್ಲವೇ?" ಎಂದು ಕೇಳಿದೆ.
"ಪಾದಯಾತ್ರೆ ಯಲ್ಲಿ ಭಾಗವಹಿಸಿದವರು ಪ್ರತಿ ದಿನ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಅವರಿಂದಾಗಿಯೇ ಬೆಂಗಳೂರಿನಲ್ಲಿ ಕೊರೋನಾ ಸ್ಫೋಟವಾಗಿದೆ. ಡಿಕೆಶಿ ಅವರೇ, ಬೆಂಗಳೂರಿಗೆ ಬಂದು ಹೋದ ಕಾರ್ಯಕರ್ತರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದೀರಾ? ಅವರ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿ. ಆಗ ನಿಮ್ಮ ನಿಜಬಣ್ಣ ಬಯಲಾಗುತ್ತದೆ" ಎಂದಿದೆ.
"ಡಿಕೆಶಿ ಅವರೇ, ನೀವು ಪಾದಯಾತ್ರೆ ನಿಲ್ಲಿಸಿದ್ದು ಕೋರ್ಟ್ ಚಾಟಿ ಏಟಿನಿಂದಲೋ ಅಥವಾ ಹೈಕಮಾಂಡ್ ಮೇಲಿನ ಭಯದಿಂದಲೋ? ಅಥವಾ ಒಬ್ಬೊಬ್ಬರಾಗಿ ಸೋಂಕಿತರಾಗುತ್ತಿರುವ ನಿಮ್ಮ ನಾಯಕರ ಕುಟುಂಬ ವರ್ಗದ ಹಿಡಿ ಶಾಪಕ್ಕೋ?" ಎಂದು ಪ್ರಶ್ನಿಸಿದೆ.