ಉತ್ತರ ಪ್ರದೇಶ, ಜ 13 (DaijiworldNews/AN): ಉತ್ತರ ಪ್ರದೇಶ ಸರ್ಕಾರದ ಮತ್ತೊಂದು ವಿಕೆಟ್ ಪತನವಾಗಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳಿರುವಾಗಲೇ ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿ ತೊರೆದ ನಂತರ ಧರಂ ಸಿಂಗ್ ಧನಿ, ಮುಖೇಶ್ ವರ್ಮಾ, ವಿನಯ್ ಶಾಕ್ಯಾ, ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್, ದಾರಾ ಸಿಂಗ್ ಚೌಹಾಣ್, ಅವತಾರ್ ಸಿಂಗ್ ಭದಾನ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಧರಂ ಸಿಂಗ್ ಅವರು ನೀಡಿರುವ ರಾಜೀನಾಮೆಯಲ್ಲಿ, ನಿರುದ್ಯೋಗಿ ಯುವಕರು ಸೇರಿದಂತೆ ಸಣ್ಣ ವ್ಯಾಪಾರಿಗಳು, ರೈತರ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ನಾನು ರಾಜೀನಾಮೆ ನೀಡುತ್ತಿದ್ಧೇನೆ ಎಂದು ಉಲ್ಲೇಖಿಸಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್, ಯೋಗಿ ಆದಿತ್ಯನಾಥ್ ಸಚಿವ ಸಂಪುಟದಿಂದ ಪ್ರತಿದಿನ ಒಂದರಿಂದ ಇಬ್ಬರು ಸಚಿವರು ಹೊರಬರುತ್ತಾರೆ. ಜ.20ರ ವೇಳೆಗೆ ಈ ಸಂಖ್ಯೆಯು 18ಕ್ಕೆ ಏರಲಿದೆ ಎಂದಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು, ಫೆಬ್ರವರಿ 10 ರಿಂದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.