ಬೆಂಗಳೂರು, ಜ 13 (DaijiworldNews/PY): "ಮೇಕೆದಾಟು ಪಾದಯಾತ್ರೆಯಿಂದ ಕಾಂಗ್ರೆಸ್ನ ಭಟ್ಟಂಗಿ ರಾಜಕಾರಣದ ನಗ್ನ ದರ್ಶನವಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
"ಕಾಂಗ್ರೆಸ್ಸಿಗರು ಅಧಿಕಾರ ದಾಹಕ್ಕಾಗಿ ಈ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ರಾಜ್ಯದ ಜನತೆ ತಿಳಿದಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನ ಹತಾಶೆ ಹಾಗೂ ಅಧಿಕಾರದ ದಾಹವು ದೇಶದೆಲ್ಲೆಡೆ ಪ್ರಕಟವಾಗಿದೆ" ಎಂದಿದ್ದಾರೆ.
"ತಮ್ಮ ಪಕ್ಷದ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಪಾದಯಾತ್ರೆಯೆನ್ನುವ ನೆಪವೊಡ್ಡಿ ಕೊರೊನಾ ಹಬ್ಬಿಸಲು ಕಾಂಗ್ರೆಸ್ ಕಾರಣವಾಗಿದೆ. ದೇಶದ ಕಾನೂನು ಹಾಗೂ ಸಂವಿಧಾನವನ್ನು ಗೌರವಿಸಲು ಇಡೀ ಕಾಂಗ್ರೆಸ್ ವಿಫಲವಾಗಿದೆ. ದೇಶದ ಜನತೆಯ ಮುಂದೆ ಕಾಂಗ್ರೆಸ್ ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದ್ದಾರೆ.
"ಕಾನೂನು ಉಲ್ಲಂಘಿಸಿ ಹಾಗೂ ಕೊರೊನಾ ಹಬ್ಬಲು ಕಾರಣರಾದ ಕಾಂಗ್ರೆಸ್ಸಿಗರ ವಿರುದ್ದ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ.