ಬೆಂಗಳೂರು, ಜ 13 (DaijiworldNews/MS): ಪಾದಯಾತ್ರೆ ಮೂಲಕ ವೈರಸ್ ಹಬ್ಬಿಸಿ, ರಾಜ್ಯದ ಜನರ ಆತಂಕಕ್ಕೆ ಕಾರಣವಾದ ಕಾಂಗ್ರೆಸ್ ಬೇಷರತ್ ಕ್ಷಮೆ ಯಾಚಿಸುವಂತೆ ರಾಜ್ಯ ಬಿಜೆಪಿ ಆಗ್ರಹಿಸಿದೆ.
್ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ 5ನೇ ದಿನದ ಪಾದಯಾತ್ರೆ ಕೈ ಹೈಕಮಾಂಡ್ ಆದೇಶದಂತೆ ತಾತ್ಕಾಲಿಕವಾಗಿ ಮೊಟಕುಗೊಂಡಿದೆ. ಇದರ ಬೆನ್ನಲ್ಲೇ ಟ್ವಿಟ್ ಮಾಡಿರುವ ಬಿಜೆಪಿಯೂ ಕಾಂಗ್ರೆಸ್ ವರಿಷ್ಠರೂ ಸೇರಿದಂತೆ ರಾಜ್ಯ ನಾಯಕರು ಜನತೆಯ ಮುಂದೆ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದೆ
"ಕೋವಿಡ್ ಎಲ್ಲಿದೆ, ಕೋವಿಡ್ ಎಲ್ಲಿದೆ ಎಂದು ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಉದ್ಧಟತನ ಪ್ರದರ್ಶಿಸಿದ್ದರು. ಕಾಂಗ್ರೆಸ್ಸಿಗರ ಉದ್ಧಟತನದಿಂದ ಇಂದು ರಾಜ್ಯದಲ್ಲಿ ಸೋಂಕಿನ ಪ್ರಮಾಣ 22 ಸಾವಿರ ತಲುಪಿದೆ.ವೈರಸ್ ಹಬ್ಬಿಸಿ, ರಾಜ್ಯದ ಜನರ ಆತಂಕಕ್ಕೆ ಕಾರಣವಾದ ಕಾಂಗ್ರೆಸ್ ಬೇಷರತ್ ಕ್ಷಮೆ ಯಾಚಿಸಲಿ. ಕೋವಿಡ್ ನಿಯಂತ್ರಣಕ್ಕಾಗಿ ಪ್ರಧಾನಿ ಏನು ಮಾಡಿದ್ದಾರೆಂದು ಪ್ರಶ್ನೆ ಮಾಡುತ್ತಿದ್ದ ಕಾಂಗ್ರೆಸ್ ವರಿಷ್ಠರೂ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಬೇಕು.ನಿಮ್ಮ ರಾಜ್ಯ ಘಟಕದ ಉದ್ಧಟತನ, ಬೇಜವಾಬ್ದಾರಿಯಿಂದ ಇಂದು ಕರ್ನಾಟಕದಲ್ಲಿ ಕೋವಿಡ್ ಸ್ಫೋಟಗೊಂಡಿದೆ" ಎಂದು ಬಿಜೆಪಿ ಆರೋಪಿಸಿದೆ.
"ಅಂತಿಮವಾಗಿ ಕಾಂಗ್ರೆಸ್ ಪಕ್ಷ ಈ ದೇಶದ ಸಂವಿಧಾನ ಹಾಗೂ ಕಾನೂನನ್ನು ಅಪಮಾನಗೊಳಿಸಿದೆ.ಹೈಕೋರ್ಟ್ ಛೀಮಾರಿ ಹಾಕಿದ ಮೇಲೂ ಉದ್ದಟತನದಿಂದ ವರ್ತಿಸಿದ್ದ ಸಿದ್ದರಾಮಯ್ಯ, ಡಿಕೆಶಿ ಅವರು ಹೈಕಮಾಂಡ್ ಆಣತಿ ಮೇರೆಗೆ ಪಾದಯಾತ್ರೆ ನಿಲ್ಲಿಸಿದ್ದಾರೆ. ಇವರಿಗೆ ಸಂವಿಧಾನಕ್ಕಿಂತ ನಕಲಿ ಗಾಂಧಿ ಕುಟುಂಬವೇ ಶ್ರೇಷ್ಠ! "ಎಂದು ಕಿಡಿಕಾರಿದೆ.