ನವದೆಹಲಿ, ಜ 13 (DaijiworldNews/AN): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಪ್ರಮುಖ ಅಭ್ಯರ್ಥಿಗಳ ಮಾಹಿತಿಯನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಒಟ್ಟು 125 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು ಇದರಲ್ಲಿ ಶೇ.40 ರಷ್ಟು ಅಂದರೆ 50 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ.
ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್
ಕಾಂಗ್ರೆಸ್ ಪಟ್ಟಿಯಲ್ಲಿ ಅಭ್ಯರ್ಥಿಯಾಗಿ 2017ರ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಯಾದ ಆಶಾ ಸಿಂಗ್ ಅವರ ಹೆಸರೂ ಸೇರಿಸಲಾಗಿದೆ. ಈ ಕುರಿತು ಮಾತನಾಡಿದ ಪ್ರಿಯಾಂಕಾ " ನಮ್ಮ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳಾ ಪತ್ರಕರ್ತರು, ಹೋರಾಗಾರ್ತಿಯರು, ಸಾಮಾಜಿಕ ಕಾರ್ಯಕರ್ತರು, ಸಾಕಷ್ಟು ದೌರ್ಜನ್ಯಗಳನ್ನು ಅನುಭವಿಸಿದ ಮಹಿಳೆಯರು ಇದ್ದಾರೆ. ಈ ಹಿಂದೆ ನಾನು ಕೊಟ್ಟ ಮಾತಿನಂತೆ ಮಹಿಳೆಯರಿಗೆ ಟಿಕೆಟ್ ನೀಡಿದ್ದೇವೆ. ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿಗೂ ಟಿಕೆಟ್ ನೀಡಿದ್ದು, ಯಾವ ಅಧಿಕಾರದ ಮೂಲಕ ಆಕೆಯ ಮಗಳನ್ನು ಹಿಂಸಿಸುತ್ತಾರೋ, ಆಕೆಯ ಸಂಸಾರವೇ ಹಾಳಾಯಿತು, ಈಗ ಅವಳಿಗೂ ಅದೇ ಅಧಿಕಾರ ಸಿಗಬೇಕು" ಎಂದು ಹೇಳಿದ್ದಾರೆ.
"ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಜನರಿಗೆ ನಾವು ಅವಕಾಶ ನೀಡಲು ಬಯಸಿದ್ದೇವೆ, ಆದ್ದರಿಂದ ನಿಜವಾದ ಜನರಿಗೆ ಅವರ ಉದ್ದೇಶಕ್ಕಾಗಿ ಹೋರಾಡುವ ಅವಕಾಶ ಸಿಗುತ್ತದೆ. ಮಹಿಳೆಯರೊಂದಿಗೆ ಕಾಂಗ್ರೆಸ್ ಇದೆ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಹಿಳೆಯರು ಹೋರಾಟ ಮತ್ತು ಧೈರ್ಯಶಾಲಿ ಮಹಿಳೆಯರು. ಅವರಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ. ಈ ಮೂಲಕ ರಾಜ್ಯದ ರಾಜಕೀಯ ನಿರೂಪಣೆಯನ್ನು ಬದಲಾಯಿಸಲು ಪಕ್ಷವು ಪ್ರಯತ್ನಿಸಿದೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಪೂನಂ ಪಾಂಡೆ ಆಶಾ ಕಾರ್ಯಕರ್ತೆ, ನಿದಾ ಅಹಮದ್, ಪತ್ರಕರ್ತೆ, ಈ ವಿರೋಧಿ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಲಕ್ನೋದ ಸಾಮಾಜಿಕ ಕಾರ್ಯಕರ್ತ ಸದಾಫ್ ಜಾಫರ್ ಮುಂತಾದವರ ಹೆಸರುಗಳಿವೆ.