ರಾಮನಗರ, ಜ 13 (DaijiworldNews/PY): ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಮೊಟಕುಗೊಂಡಿದೆ.
ರಾಮ ನಗರ ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷದ ನಾಯಕರ ಸಭೆಯ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ತೀರ್ಮಾನ ಪ್ರಕಟಿಸಿದ್ದಾರೆ.
"ಎರಡು ತಿಂಗಳ ಹಿಂದೆ ನಾವು ಪಾದಯಾತ್ರೆಯನ್ನು ಘೋಷಿಸಿದ್ದೆವು. ಆ ಸಂದರ್ಭ ಕೊರೊನಾ ಹಾವಳಿ ಇರಲಿಲ್ಲ. ಹಾಗಾಗಿ ನಾವು ಪಾದಯಾತ್ರೆಯನ್ನು ಆರಂಭಿಸಿದ್ದೆವು. ಪ್ರಸ್ತುತ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾದ ಕಾರಣ ಪಾದಯಾತ್ರೆಯನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇವೆ. ಕೊರೊನಾ ಕಡಿಮೆಯಾ ಬಳಿಕ ಇಲ್ಲಿಂದಲೇ ಪಾದಯಾತ್ರೆ ಮುಂದುವರಿಸಲು ತೀರ್ಮಾನಿಸಲಾಗಿದೆ" ಎಂದಿದ್ದಾರೆ.
ಜ.9ರಿಂದ ಮೇಕೆದಾಟುವಿನಿಂದ ಆರಂಭವಾದ 11 ದಿನಗಳ ಪಾದಯಾತ್ರೆ 4 ದಿನ ಪೂರ್ಣಗೊಂಡಿದೆ. ಬುಧವಾರ ರಾತ್ರಿಯೇ ಕರ್ನಾಟಕ ಸರ್ಕಾರ ಪಾದಯಾತ್ರೆ ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ರಾಮನಗರ ಜಿಲ್ಲಾಡಳಿತ ಮತ್ತು ಪೊಲೀಸರು ಗುರುವಾರ ಪಾದಯಾತ್ರೆ ಆರಂಭವಾಗದಂತೆ ತಡೆಯಲು ಎಲ್ಲಾ ಕ್ರಮ ಕೈಗೊಂಡಿದ್ದರು.
ಕರ್ನಾಟಕ ಹೈಕೋರ್ಟ್ ಪಾದಯಾತ್ರೆ ನಡೆಸಲು ಅನುಮತಿ ನೀಡಿದ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಮತ್ತು ಕೆಪಿಸಿಸಿಗೆ ನೋಟಿಸ್ ನೀಡಿತ್ತು. ಆದ್ದರಿಂದ ಬುಧವಾರ ರಾತ್ರಿ ಸರ್ಕಾರ ಪಾದಯಾತ್ರೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿತ್ತು.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಹ ಪಾದಯಾತ್ರೆ ನಿಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಗೆ ಕರೆ ಮಾಡಿದ್ದರು. ರಾಜ್ಯದ ಹಲವು ನಾಯಕರು ಸಹ ಪಾದಯಾತ್ರೆ ನಿಲ್ಲಿಸೋಣ, ಕೊರೊನಾ ಪರಿಸ್ಥಿತಿ ಬಳಿಕ ಮುಂದುವರಿಸೋಣ ಎಂದು ಒತ್ತಾಯಿಸಿದ್ದರು.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಕಾಂಗ್ರೆಸ್ ನಾಯಕರಿಗೆ ಪತ್ರ ಬರೆದಿದ್ದರು. ಪಾದಯಾತ್ರೆ ನಿಲ್ಲಿಸಿ ಎಂದು ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮೊಟಕುಗೊಳಿಸಲು ತೀರ್ಮಾನ ಮಾಡಿದ್ದಾರೆ.