ಬೆಂಗಳೂರು, ಜ 13 (DaijiworldNews/MS): ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ 5ನೇ ದಿನದ ಪಾದಯಾತ್ರೆ ಮುಂದುವರಿದಿದೆ. ಇನ್ನೊಂದೆಡೆ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಬ್ರೇಕ್ ಹಾಕುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ಪಾದಯಾತ್ರೆ ತಡೆಯಲು ಮುಂದಾಗಿದೆ.
ಇನ್ನೊಂದೆಡೆ ಜಿಲ್ಲಾಡಳಿತ ಪಾದಯಾತ್ರೆ ಮೇಲೆ ನಿಷೇಧ ಹೇರಿದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸೇರದಂತೆ ಐದು ಮಂದಿಯಷ್ಟೇ ಪಾದಯಾತ್ರೆ ನಡೆಸಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಈ ನಡುವೆ ಮಾಧ್ಯಮದೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, " ಪಾದಯಾತ್ರೆ ನಿಲ್ಲಿಸಲು ನೋಟೀಸ್ ನೀಡಲಾಗಿದ್ದರೂ ಕೂಡ ಪಾದಯಾತ್ರೆ ಮುಂದುವರೆಯಲಿದೆ. ಪಾದಯಾತ್ರೆ ನಿಲ್ಲಿಸುವಂತೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಕೋವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಪಾದಯಾತ್ರೆ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವ ಪ್ರಶ್ನೆ ಇಲ್ಲ. ನಾನು ಪಾದಯಾತ್ರೆ ಮುಂದುವರಿಸಲು ರಾಮನಗರಕ್ಕೆ ತೆರಳುತ್ತಿದ್ದೇನೆ" ಎಂದು ಹೇಳಿದ್ದಾರೆ
ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಪಾದಯಾತ್ರೆ ಸಂಬಂಧಿಸಿ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಪ್ರಾರಂಭವಾಗಿದೆ ಪಾದಯಾತ್ರೆ ಮುಂದುವರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.