ಬೆಂಗಳೂರು, ಜ 13 (DaijiworldNews/PY): "ನನಗೆ ಯಾವುದೇ ನೋಟಿಸ್ ಬಂದಿಲ್ಲ. ಇಲ್ಲಿಯವರೆಗೆ ಏಕೆ ನಮ್ಮ ಪಾದಯಾತ್ರೆಯನ್ನು ತಡೆದಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವಂತೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ನೊಟೀಸ್ ನೀಡಿದೆ. ಈ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, "ರಾಜ್ಯ ಸರ್ಕಾರದಿಂದ ನನಗೆ ಯಾವುದೇ ನೊಟೀಸ್ ಬಂದಿಲ್ಲ" ಎಂದಿದ್ದಾರೆ.
"ಸಭೆಯ ಬಳಿಕ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ರಾಮನಗರದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಶಾಸಕರು ಹಾಗೂ ನಾಯಕರ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸರ್ಕಾರ ನಮ್ಮ ಪಾದಯಾತ್ರೆಯನ್ನು ತಡೆಯುವುದಾದರೆ ತಡೆಯಲಿ" ಎಂದು ಹೇಳಿದ್ದಾರೆ.
"ಜಿಲ್ಲಾಧಿಕಾರಿಗಳು ಸಹಿ ಮಾಡಿ ಒಂದು ನೊಟೀಸ್ ನೀಡಿದ್ದು, ಆ ನೊಟೀಸ್ ಅನ್ನು ನಾವು ಮುಟ್ಟಿಲ್ಲ. ಈಗಾಗಲೇ ಘೋಷಿಸಿರುವಂತೆ ಇಂದು 5ನೇ ದಿನ ನಮ್ಮ ಪಾದಯಾತ್ರೆ ಮುಂದುವರಿಯುತ್ತದೆ" ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದ್ದಾರೆ.