ರಾಮನಗರ, ಜ 13 (DaijiworldNews/PY): "ಹಣ ನೀಡಿ ಬೇರೆ ಜಿಲ್ಲೆಯಿಂದ ಜನರನ್ನು ಕರೆತಂದು ಅವರಿಗೆ ಕೊರೊನಾ ಅಂಟಿಸುವ ಕೆಲಸವನ್ನು ಡಿಕೆಶಿ ಬ್ರದರ್ಸ್ ಮಾಡುತ್ತಿದ್ದಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅವರ ತಂಡವನ್ನು ಬಂಧಿಸಬೇಕು ಎಂದು ಸರ್ಕಾರ ತಾಕೀತು ಮಾಡುತ್ತೇನೆ" ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿಕೆಶಿಯಂತರ ಭ್ರಷ್ಟರನ್ನು ಒಂದು ವರ್ಷ ಸಿದ್ದರಾಮಯ್ಯ ಕ್ಯಾಬಿನೇಟ್ಗೆ ತೆಗೆದುಕೊಂಡಿರಲಿಲ್ಲ. ಆದರೆ, ಬಳಿಕ ಹೈಕಮಾಂಡ್ ಒತ್ತಡಕ್ಕೆ ತೆಗೆದುಕೊಂಡರು. ಸಿದ್ದರಾಮಯ್ಯ ಅವರು ವೀಕ್ ಆಗಿದ್ದಾರೆ ಎಂದು ಅನಿಸುತ್ತದೆ. ಈ ಪುಂಡರೊಂದಿಗೆ ಅವರು ನಡೆಸುತ್ತಿದ್ದಾರೆ. ಆಗಾಗ ಬರುತ್ತಾರೆ ವಾಪಾಸ್ ಹೋಗುತ್ತಾರೆ" ಎಂದು ಲೇವಡಿ ಮಾಡಿದ್ದಾರೆ.
"ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎಂದು ಹೈಕೋರ್ಟ್ ಸೂಚಿಸಿದೆ. ಆದರೂ, ಇದರ ಉದ್ದೇಶವನ್ನು ಕೈ ನಾಯಕರು ಅರ್ಥ ಮಾಡಿಕೊಳ್ಳುತ್ತಿಲ್ಲ" ಎಂದಿದ್ದಾರೆ.
"ಕಾಂಗ್ರೆಸ್, ಕೊರೊನಾ ಹೆಚ್ಚಳವನ್ನು ಅರ್ಥ ಮಾಡಿಕೊಳ್ಳದೇ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಕಾವೇರಿ ನಮ್ಮ ನರನಾಡಿಯಲ್ಲಿದೆ. ನಾವೆಲ್ಲರೂ ಅದನ್ನೇ ಕುಡಿದು ಬೆಳೆದಿದ್ದು" ಎಂದು ಹೇಳಿದ್ದಾರೆ.
"ಪ್ರತಿ ಮಾತಿಗೂ ಡಿಕೆಶಿ ಸಾಕ್ಷಿ ಗುಡ್ಡೆ ಎನ್ನುತ್ತಾರೆ. ಅವರು ಏನು ಸಾಕ್ಷಿ ಇಟ್ಟಿದ್ದಾರೆ. ಇದೊಂದು ಡೋಂಗಿ ಪಾದಯಾತ್ರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಕೈನಾಯಕರು ಈ ಡೊಂಬರಾಟ ಮಾಡುತ್ತಿದ್ದಾರೆ" ಎದು ಆಕ್ರೋಶ ವ್ಯಕ್ತಪಡಿಸಿದ್ದಾರೆ.