ಬೆಂಗಳೂರು, ಜ 12 (DaijiworldNews/HR): ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ನಾಯಕರು ತಕ್ಷಣ ಈ ಪಾದಯಾತ್ರೆಯನ್ನು ನಿಲ್ಲಿಸುವಂತೆ ಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ.
ಇನ್ನು ಪಾದಯಾತ್ರೆಯ ವಾಹನ ಸಂಚಾರ, ಜನಸಂಚಾರ ನಿಷೇಧಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶ ಉಲ್ಲಂಘಿಸಿ ಪಾದಯಾತ್ರೆ ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕಾಂಗ್ರೆಸ್ ಪಕ್ಷವು ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದು, ಇಂದು ನಾಲ್ಕನೇ ದಿನದ ಪಾದಯಾತ್ರೆ ನಡೆಯುತ್ತಿತ್ತು. ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್ ವರೆಗೂ ಪಾದಯಾತ್ರೆ ನಡೆದಿತ್ತು. ಮೂರು ಎಫ್ಐಆರ್ ದಾಖಲಾಗಿದ್ದರೂ ಕೂಡ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಂದುವರಿಸಿದ್ದರು.
ಇನ್ನು ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಾಂಗ್ರೆಸ್ ನವರು ಇಂದು ಪಾದಯಾತ್ರೆಯನ್ನು ನಿಲ್ಲಿಸಬಹುದು. ಇಲ್ಲದಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದು, ಇದೀಗ ಸರ್ಕಾರ ಈ ಆದೇಶ ಹೊರಡಿಸಿದೆ.