ಬೆಂಗಳೂರು, ಜ 12 (DaijiworldNews/PY): "ಮೇಕೆದಾಟು ಪಾದಯಾತ್ರೆ ಕೊರೊನಾ ಹರಡುವ ಮೂಲಕ ಜನರ ಪ್ರಾಣಬಲಿ ಪಡೆಯುವ ಉದ್ದೇಶದಿಂದ ಕೂಡಿದಂತಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
"ಈಗಾಗಲೇ ರಾಜ್ಯ ಹೈಕೋರ್ಟ್ ಪಾದಯಾತ್ರೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಂಗದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸವಿದ್ದಲ್ಲಿ ಹಾಗೂ ಜನರ ಜೀವನದ ಬಗ್ಗೆ ಕಳಕಳಿ ಇದ್ದಲ್ಲಿ ಕೂಡಲೇ ಅವರ ಪಾದಯಾತ್ರೆಯನ್ನು ನಿಲ್ಲಿಸಬೇಕು. ಅಲ್ಲದೇ, ಕೊರೊನಾ ಸೋಂಕು ಹೆಚ್ಚಿಸಲು ಕಾರಣವಾಗಿದ್ದಕ್ಕೆ ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದರು.
"ಈ ಪಾದಯಾತ್ರೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪ್ರತಿಷ್ಠೆಯ ಪಾದಯಾತ್ರೆಯಂತಿದೆ. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಅನಪೇಕ್ಷಿತ ವಿಳಂ ಹಾಗೂ ಬಿಜೆಪಿ ಸರ್ಕಾರದ ಬದ್ಧತೆಯ ಅರಿವಿದ್ದರೂ ಸಹ ಪಾದಯಾತ್ರೆಯನ್ನು ಮುಂದುವರಿಸಲಾಗುತ್ತಿದೆ" ಎಂದರು.
"ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರವು ನೆಲ, ಜಲ, ಭಾಷೆಯ ಬಗ್ಗೆ ಎಂದೂ ರಾಜಿ ಮಾಡಿಕೊಳ್ಳಲ್ಲ. ಸದಾ ಜನಪರ ಕಾರ್ಯಗಳನ್ನು ಮುಂದುವರಿಸುತ್ತದೆ" ಎಂದು ತಿಳಿಸಿದರು.