ಮಧುರೈ, ಜ 12 (DaijiworldNews/AN): ವಾಹನ ಖರೀದಿಸಲು ಇಚ್ಛಿಸುವ ಅಂಧ ಶಿಕ್ಷಕರಿಗೆ ಸೇವಾ ತೆರಿಗೆ ವಿನಾಯಿತಿ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಆರ್ಥೋಪೆಡಿಕ್ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಇಂತಹ ರಿಯಾಯಿತಿ ನೀಡಬಹುದು ಎಂಬ ಕಾರಣಕ್ಕೆ ಸರ್ಕಾರ ಈ ಹಿಂದೆ ಅರ್ಜಿಯನ್ನು ತಿರಸ್ಕರಿಸಿತ್ತು.
ಕೇಂದ್ರ ಸರ್ಕಾರದ ಪರವಾಗಿ ಸಹಾಯಕ ಸಾಲಿಸಿಟರ್ ಜನರಲ್ ಎಲ್ ವಿಕ್ಟೋರಿಯಾ ಗೌರಿ ವಾದ ಮಂಡಿಸಿದ ನಂತರ ನ್ಯಾಯಮೂರ್ತಿ ಎಂ ಸುಂದರ್ ಈ ನಿರ್ದೇಶನ ನೀಡಿದ್ದು, ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ರಚಿಸಿರುವ ಸಮಿತಿಯು ಎಲ್ಲಾ 21 ವರ್ಗದ ವಿಕಲಚೇತನರಿಗೆ ಶೇ.18 ರಷ್ಟು ರಿಯಾಯಿತಿಯನ್ನು ನೀಡಲು ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ದಾಖಲೆಗಳು ಪರಿಶೀಲಿಸಿದ ನ್ಯಾಯಾಧೀಶರು, ಜನವರಿ 31ರೊಳಗೆ ಅರ್ಜಿದಾರರ ಅರ್ಜಿಯನ್ನು ಪ್ರಕ್ರಿಯೆಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದರು. ಕನ್ಯಾಕುಮಾರಿಯ ಸರ್ಕಾರಿ ಶಾಲೆಯ ಶಿಕ್ಷಕ ಕೆ ಪರಂತಮನ್ ಅವರ ಅರ್ಜಿಯ ಮೇರೆಗೆ ಈ ನಿರ್ದೇಶನಗಳನ್ನು ನೀಡಲಾಗಿದ್ದು, ಪರಂತಮನ್ ಅವರು ಕಳೆದ ವರ್ಷ ಜುಲೈನಲ್ಲಿ ಕೇಂದ್ರ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯಕ್ಕೆ ಅರ್ಜಿಯನ್ನು ಕಳುಹಿಸಿದ್ದರು. ಆದರೆ, ಕೆಲವು ದಿನಗಳ ನಂತರ ಅರ್ಜಿಯನ್ನು ತಿರಸ್ಕರಿಸಲಾಯಿತು, ಆರ್ಥೋಪೆಡಿಕ್ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಈ ರಿಯಾಯಿತಿಗೆ ಅರ್ಹರು ಎಂದು ತಿಳಿಸಿದ್ದಾರೆ.