ಲಕ್ನೋ, ಜ 12 (DaijiworldNews/MS): ಉತ್ತರ ಪ್ರದೇಶದ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆಯೇ ಎರಡು ದಿನಗಳ ಅಂತರದಲ್ಲಿ, ಎರಡನೇ ಸಚಿವರೊಬ್ಬರು ಸಂಪುಟಕ್ಕೆ ರಾಜೀನಾಮೆ ನೀಡಿದ್ದು ಇದರಿಂದ ಯೋಗಿ ನೇತೃತ್ವದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ.
ಈ ಹಿಂದೆ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಂಪುಟ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಎರಡು ದಿನಗಳ ಅಂತರದಲ್ಲಿ ಸಚಿವ ದಾರಾ ಸಿಂಗ್ ಚೌಹಾಣ್ ಬುಧವಾರ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
2017 ರಿಂದ ಆದಿತ್ಯನಾಥ್ ಸಂಪುಟದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ದಾರಾ ಸಿಂಗ್ ಚೌಹಾಣ್, "ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದಲ್ಲಿ ಹಿಂದುಳಿದ ಜಾತಿಗಳು, ದಲಿತರಿಗೆ ಹಾಗೂ ಕೆಳ ಸಮುದಾಯದ ಜನರಿಗೆ ಅನ್ಯಾಯ ಮಾಡಿದೆ "ಎಂದು ಆರೋಪಿಸಿದ್ದಾರೆ.
ಚೌಹಾಣ್ ತಮ್ಮ ರಾಜೀನಾಮೆ ಪತ್ರದಲ್ಲಿ, ತಮ್ಮ ಎಲ್ಲಾ ಪ್ರಯತ್ನದ ನಂತರವೂ " ಹಿಂದುಳಿದ ವರ್ಗಗಳು, ದಲಿತರು, ರೈತರು ಮತ್ತು ನಿರುದ್ಯೋಗಿ ಯುವಕರನ್ನು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಮೀಸಲಾತಿಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.
ಮಧುಬನ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಚೌಹಾಣ್ ಒಬಿಸಿ ವರ್ಗದ ನಾಯಕರಾಗಿ ಗುರುತಿಸಿಕೊಂಡಿದ್ದರು. ಬಹುಜನ ಸಮಾಜ ಪಕ್ಷದ ತೊರೆದು ಇವರು 2015 ರಲ್ಲಿ ಬಿಜೆಪಿ ಸೇರಿ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಚೌಹಾಣ್ ರಾಜೀನಾಮೆಗೂ ಮುನ್ನ , ನಾಲ್ಕು ಇಲಾಖೆಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಸ್ವಾಮಿ ಪ್ರಸಾದ್, ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿರುವುದು ಬಿಜೆಪಿ ಪಾಳಯದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು.