ಬೆಂಗಳೂರು, ಜ 12 (DaijiworldNews/PY): "ಕಾಂಗ್ರೆಸ್ ಹಮ್ಮಿಕೊಂಡಿರುವ ಕೋವಿಡ್ ಯಾತ್ರೆ ಮತ್ತು ಕೋವಿಡ್ ಸೋಂಕಿತರು, ಎಚ್.ಎಂ. ರೇವಣ್ಣ, ಸಿ.ಎಂ. ಇಬ್ರಾಹಿಂ, ಎನ್.ಎಚ್. ಶಿವಶಂಕರ ರೆಡ್ಡಿ ಕಾಂಗ್ರೆಸ್ ಹಿರಿಯ ನಾಯಕರೂ ಯಾತ್ರೆ ನಿಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ, ಆದರೂ ಡಿ ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಮ್ಮತ್ತು ನೀಡುತ್ತಿಲ್ಲ" ಎಂದು ಬಿಜೆಪಿ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಡಿಕೆಶಿ ಅವರೇ, ನೀವು ಮೇಕೆದಾಟು ಹೋರಾಟ ನಡೆಸಿ. ಆದರೆ ಅದಕ್ಕೆ ಸಮಯ ಸಂದರ್ಭದ ಅರಿವು ಬೇಡವೇ? ಕೋವಿಡ್ಯಾತ್ರೆಯಲ್ಲಿ ಭಾಗವಹಿಸಿದ ನಾಯಕರಿಗೆ ಸೋಂಕು ತಗಲುತ್ತಿದೆ. ಎಚ್ಚೆತ್ತುಕೊಳ್ಳಿ, ಮೇಕೆದಾಟು ಹೋರಾಟದ ಹೆಸರಿನಲ್ಲಿ ಅಮಾಯಕರ ಪ್ರಾಣದಾಟಿಸಬೇಡಿ" ಎಂದಿದೆ.
"ಮೇಕೆದಾಟು ಪಾದಯಾತ್ರೆಯ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಅಗತ್ಯವಿತ್ತೇ ಎಂದು ಕೆಪಿಸಿಸಿಯನ್ನು ಪ್ರಶ್ನಿಸಿದೆ. ಕಾಂಗ್ರೆಸ್ಸಿಗರೇ, ಜನರ ಭಾವನೆಯನ್ನು ಧಿಕ್ಕರಿಸಿದಿರಿ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದಿರಿ, ನ್ಯಾಯಾಲಯಕ್ಕಾದರೂ ತಲೆಬಾಗುವಿರಾ?" ಎಂದು ಪ್ರಶ್ನಿಸಿದೆ.
"ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂಬ ಸರ್ಕಾರದ ಮನವಿಗೆ ಕಾಂಗ್ರೆಸ್ ಒಪ್ಪುತ್ತಿಲ್ಲ. ನಿಮ್ಮ ವೈಯಕ್ತಿಕ ಹಠ ಸಾಧನೆಗಾಗಿ ಜನರನ್ನೇಕೆ ಸಂಕಷ್ಟಕ್ಕೆ ದೂಡುತ್ತಿದ್ದೀರಿ? ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದೆ. ಈಗಲಾದರೂ ಸುಳ್ಳಿನಜಾತ್ರೆ ನಿಲ್ಲಿಸುತ್ತೀರೋ ಅಥವಾ SuperSpreaderCONgress ಎನಿಸಿಕೊಳ್ಳುತ್ತೀರಾ?" ಎಂದು ಕೇಳಿದೆ.
"ನ್ಯಾಯಾಲಯ ಪಾದಯಾತ್ರೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕವೂ ಪ್ರತಿಭಟನೆ ನಮ್ಮ ಹಕ್ಕು ಎಂದು ಸಿದ್ದರಾಮಯ್ಯ ಹಠ ಮುಂದುವರಿಸುತ್ತಿದ್ದಾರೆ. ನ್ಯಾಯಾಲಯದ ಮೇಲೂ ಕಾಂಗ್ರೆಸ್ಸಿಗರಿಗೆ ಗೌರವ ಇಲ್ಲವೇ? ಕಾಂಗ್ರೆಸ್ ನಾಯಕರು ತಮ್ಮ ನೀಚ ರಾಜಕಾರಣಕ್ಕಾಗಿ ಸಂವಿಧಾನದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದೆ.